ಸಮತೋಲನ

ಸಮತೋಲನ

'ಸಮತೋಲನ' ಈ ಪದಕ್ಕೆ ಸಮಚಿತ್ತ, ಸಮತೆ, ತೂಕಬದ್ಧತೆ ಎಂಬ ಶಬ್ದಾರ್ಥಗಳಿವೆ. ಈ ಪದವನ್ನು ನಾವು ಹಲವು ಸಂದರ್ಭಗಳಲ್ಲಿ ಬಳಸುತ್ತೇವೆ. ಆರೋಗ್ಯದ ವಿಚಾರದಲ್ಲಿ ಸಮತೋಲನ ಪದಕ್ಕೆ ಬಹಳ ಮಹತ್ವವುಂಟು. ಭಾರತೀಯ ವೈದ್ಯಶಾಸ್ತ್ರ ಮತ್ತು ಭಾರತೀಯ ತತ್ತ್ವಶಾಸ್ತ್ರದ ಆಧಾರದ ಮೇಲೆ ಈ ಸಮತೋಲನ ಎಂಬುದರ ಬಗ್ಗೆ ಪ್ರಸ್ತುತ ವಿಚಾರ ಮಾಡೋಣ.
ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಬಗೆಯ ಜೀವಂತ ಮತ್ತು ನಿರ್ಜೀವವಾಗಿರುವ ಎಲ್ಲಾ ಚರ ಮತ್ತು ಅಚರ ವಸ್ತುಗಳನ್ನೂ ಒಮ್ಮೆ ಗಮನಿಸೋಣ. ಅವು ಆ ಬಗೆಯಲ್ಲಿ ಅಸ್ತಿತ್ವದಲ್ಲಿರುವುದಕ್ಕೆ ಆ ವಸ್ತು ಅಥವಾ ಜೀವಿಯ ಒಳಗಿನ ವಿಶೇಷ ಸಮತೋಲನವೇ ಕಾರಣ.
ಈ ಸಮತೋಲನ ವಸ್ತುವಿನಿಂದ ವಸ್ತುವಿಗೆ, ಜೀವಿಯಿಂದ ಜೀವಿಗೆ, ಒಬ್ಬನಿಂದ ಮತ್ತೊಬ್ಬನಿಗೆ ಭಿನ್ನ ಭಿನ್ನವಾಗಿರುತ್ತದೆ. ಇದು ಮಣ್ಣು, ನೀರು, ಅಗ್ನಿ, ಆಕಾಶ, ವಾಯು ಈ ಪಂಚಮಹಾಭೂತಗಳ ಸಮತೋಲನವಾಗಿರುತ್ತದೆ.
ಅಸ್ತಿತ್ವದಲ್ಲಿ ಪ್ರತಿಯೊಂದು ವಸ್ತುವಿನ ಇರುವಿಕೆಗೂ ಈ ಪಂಚಮಹಾಭೂತಗಳ ನಿಷ್ಪತ್ತಿ ಕಾರಣ. ನಮ್ಮ ಎಲ್ಲಾ ಮೂಲವಸ್ತುಗಳು, ಪದಾರ್ಥಗಳು ಸರ್ವವೂ ಪಂಚಮಹಾಭೂತಗಳ ವೈವಿಧ್ಯಮಯ ಸಂಯೋಜನೆ, ವರ್ತನೆ, ಕಾರ್ಯ ಕಾರಣ ಪರಿಣಾಮ ತತ್ತ್ವದ ಮೇಲೆಯೇ ಇರುತ್ತವೆ. ಎಲ್ಲಾ ವಸ್ತುಗಳಲ್ಲಿ ಇವುಗಳ ನಿಷ್ಪತ್ತಿಯ ವ್ಯತ್ಯಾಸದಿಂದ ಗುಣಗಳಲ್ಲಿ ವ್ಯತ್ಯಾಸ ಇರುತ್ತದೆ.
ನಿಷ್ಪತ್ತಿಯು ತಾತ್ಪೂರ್ತಿಕವಾಗಿ ಬದಲಾದರೆ ವಸ್ತುವು ತನ್ನ ಸ್ಥಿತಿಯನ್ನು ಬದಲಾಯಿಸಿ ಬೇರೆಯದೇ ಆಗುತ್ತದೆ. ನಮ್ಮ ದೇಹದಲ್ಲಿ ಈ ಪಂಚಮಹಾಭೂತಗಳ ನಿಷ್ಪತ್ತಿಯು ನಮ್ಮ ಯೋಗದಂತೆ ಇರುತ್ತದೆ. ಅದು ನಮ್ಮ ಯೋಗಕ್ಕನುಗುಣವಾಗಿಯೇ ಇರುವಂಥದ್ದಾಗಿರುತ್ತದೆ ಮತ್ತು ದೇಶಕಾಲಗಳಲ್ಲಿ ನಿರಂತರವಾಗಿ ಅದಲು ಬದಲು ಆಗುತ್ತಿರುತ್ತದೆ.
ನಿಷ್ಪತ್ತಿಯ ವಿಚಾರ ಮಾಡೋಣ. ಮುಖ್ಯವಾಗಿ ಅನಾರೋಗ್ಯವೊಂದು ಬಂದಾಗ ಏನು ಮಾಡಬೇಕು ಎಂಬ ಬಗ್ಗೆ ನೋಡೋಣ. ದೇಹದ ಯಾವುದೇ ಅಂಗದಲ್ಲಿ ಅನಾರೋಗ್ಯ ಬಂತು ಎಂದರೆ ನಿಷ್ಪತ್ತಿಯಲ್ಲಿ ವ್ಯತ್ಯಾಸವಾಗಿದೆ ಎಂದರ್ಥ. ಅಂದರೆ ಆಗ ನಮ್ಮ ಇರುವಿಕೆಗೆ ಇರುವ ಆ ದೋಷವನ್ನು ದೂರ ಮಾಡಬೇಕು.
ನಾವು ಈಗಾಗಲೇ ಪಂಚಮಹಾಭೂತಗಳ ನಿಷ್ಪತ್ತಿಯಲ್ಲಿ ವ್ಯತ್ಯಾಸವಾದರೆ ಗುಣಗಳಲ್ಲಿ ವ್ಯತ್ಯಾಸವಾಗುತ್ತದೆ ಎಂದೆವು. ಯಾವುದೇ ಗುಣ ಅತಿಯಾದರೆ ಸಮತೋಲನದಲ್ಲಿ ವ್ಯತ್ಯಾಸವಾಗುವುದರಿಂದ ಅದು ಅವಗುಣವಾಗಿಬಿಡುತ್ತದೆ. ಎಲ್ಲ ಗುಣಗಳೂ ನಮ್ಮಲ್ಲಿ ಇರಬೇಕು ಹಾಗೂ ಅವು ಹಿತವಾಗಿ, ಯುಕ್ತವಾಗಿರಬೇಕು. ಇಲ್ಲವಾದಲ್ಲಿ ಒತ್ತಡದ ತಾರತಮ್ಯವಾಗಿ ಸಮತೋಲನದಲ್ಲಿ ಏರುಪೇರುಗಳಾಗುವುದರಿಂದ ಸಮತೋಲನವನ್ನು ಕಾಯ್ದುಕೊಳ್ಳಲು ಅಗತ್ಯವಾದ ಸನ್ನಿವೇಶಗಳು ಸೃಷ್ಟಿಯಾಗುತ್ತವೆ.
ನಮ್ಮ ಯಾವ ಗುಣಗಳು ಜಗತ್ತಿನಲ್ಲಿ ಹೆಚ್ಚಾದವು ಅಥವಾ ಕಡಿಮೆಯಾದವು? ಸ್ವಲ್ಪ ಅಂತರಾವಲೋಕನ ಮಾಡಿದರೆ ನಮಗೆ ಅದು ಹೊಳೆಯುವಂಥದ್ದು. ನಮ್ಮ ಸುತ್ತಮುತ್ತಲಿನ ವಸ್ತುಗಳಲ್ಲಿ, ಜೀವಿಗಳಲ್ಲಿ, ಮನುಷ್ಯರಲ್ಲಿ ಯಾವ ಗುಣವನ್ನು ನಾವು ಅತಿಯಾಗಿ ತೋರಿದೆವು ಅಥವಾ ಯಾವ ಗುಣ ವ್ಯಕ್ತವೇ ಆಗಲಿಲ್ಲವೋ ಅದು ತನ್ನ ತಾರತಮ್ಯ ಕಳೆಯಲು ಪ್ರಯತ್ನಿಸುವ ಸಂದರ್ಭದಲ್ಲಿ ನಮಗೆ ಅಧಿಭೌತಿಕ, ಅಧಿದೈವಿಕ, ಆಧ್ಯಾತ್ಮಿಕ ರೂಪದ ಕಷ್ಟ, ಅನಾರೋಗ್ಯ ಉಂಟಾಗಿರುತ್ತದೆ. ನಮ್ಮ ನಾಲಿಗೆಯಲ್ಲಿ ರುಚಿಯೇ ಬೇರೆಯಾದರೆ ಆಹಾರದಲ್ಲಿ ವ್ಯತ್ಯಾಸ ಮಾಡಿಕೊಳ್ಳಬೇಕು ಎಂಬರ್ಥ.
ಎಲ್ಲಾ ಅನಾರೋಗ್ಯ, ಕಷ್ಟಗಳಿಗೆ ಪರಿಹಾರ ಕ್ವಾಂಟಂ ಹೀಲಿಂಗ್. "ಯೋಗಾತ್ ರೋಗ ನಿವಾರಣಮ್". ನಾವೀಗ ನಮ್ಮ  ಮೂಲಸ್ವರೂಪದ ಬಗ್ಗೆ ವಿಚಾರ ಮಾಡಬೇಕು. ನಮ್ಮ ಯಾವುದೋ ಅಂಗಕ್ಕೆ ಕಾಯಿಲೆಯಿರುವುದನ್ನು, ನಮ್ಮ ನಾಲಿಗೆಗೆ ತಿಳಿಯದ ರುಚಿಯನ್ನು, ನಮ್ಮ ನೋಟ ಗುರುತಿಸದ ರೂಪವೊಂದನ್ನು, ನಮ್ಮ ಸ್ಪರ್ಶ ತಿಳಿಯದ ಅನುಭವವನ್ನು, ಮೂಗು ಆಘ್ರಾಣಿಸಲಾಗದ ವಾಸನೆಯೊಂದನ್ನು ಕಿವಿಯು ಕೇಳಲಾಗದ ಶಬ್ದವೊಂದನ್ನು ಹೀಗೆ ಯಾವುದರ ಕೊರತೆಯಾಗಿದೆಯೋ ಅದು ಇಲ್ಲವಾಗಬೇಕು ಅಷ್ಟೇ. ಒಂದು ಗುಣ ಹೆಚ್ಚಾಗಿ ಪರಿಗಣನೆಯಾಗಿದ್ದರೆ ಅದನ್ನು ಬಿಡಲು ಬೇರೆ ಗುಣಗಳಿಗೆ ಆದ್ಯತೆ, ಗಮನ ನೀಡಬೇಕು. ಇಲ್ಲಿ ಯಾವುದೋ ಒಂದು ಅಂಗಕ್ಕೆ ಅಥವಾ ಭಾಗಕ್ಕೆ ಅಥವಾ ವಿಷಯಕ್ಕೆ ನಾವು ಹೆಚ್ಚು ಮಹತ್ವ ನೀಡಿರುತ್ತೇವಾದರೆ ಅದು ಬದಲಾಗಬೇಕು. ಆಗ ನಮ್ಮ ಸಮಯವೇ ಬದಲಾಗುತ್ತದೆ. ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ.
ನಮ್ಮಲ್ಲಿ ಇರಬೇಕಾದುದು ಯೋಗದ ಮೂಲಕ ದೇಹದ ಎಲ್ಲಾ ಅಂಗಗಳಿಗೂ, ಎಲ್ಲಾ ಪ್ರತಿಕ್ಷಣ ಬದಲಾಗುತ್ತಾ ಬದುಕಿಸುತ್ತಲೇ ಇರುವ ನಮ್ಮ ಒಂದು ಬಿಲಿಯನ್‌ಗೂ ಅಧಿಕ ಜೀವಕೋಶಗಳಿಗೂ ಅದರದ್ದೇ ಆದ ಅಂತಃಪ್ರಜ್ಞೆ, ಗೌರವವಿರುವುದನ್ನು ಗುರುತಿಸುವ ಶ್ರದ್ಧೆ. ದೇಹದೊಳಗೆ ಪರಿಶುದ್ಧವಾದ ಬ್ರಹ್ಮಾಂಡದ ಚೈತನ್ಯವಿರುವುದನ್ನು ಕಾಣುವುದು. ಇನ್ನು ಲೋಕದಲ್ಲಿ ಎಲ್ಲಾ ವಸ್ತು, ವಿಷಯ, ವ್ಯಕ್ತಿಗಳು ಅವು ಯಾರೇ ಇರಬಹುದು ಅವೆಲ್ಲವೂ ನಮ್ಮ ಭಾಗವೇ ಆಗಿರುವುದರಿಂದ ಅವೆಲ್ಲದರ ಅಂತರಾತ್ಮದಲ್ಲಿರುವ ಪರಮಾತ್ಮನನ್ನು ಗುರುತಿಸುವ ಶ್ರದ್ಧೆ. ನಮ್ಮ ಜಗಳ, ಪ್ರೀತಿ, ವ್ಯವಹಾರ ಎಲ್ಲವೂ ಗುಣಗಳ ವರ್ತನೆಯಿಂದ ಆದದ್ದು ಹೊರತು ಅದಕ್ಕೆ ಆ ವಸ್ತು, ಜೀವಿ, ನಾವು ಯಾರೂ ಕಾರಣವಲ್ಲ ಮತ್ತು ಅದು ಸಹಜವೇ. ಹಾಗಿದ್ದೂ ನಮ್ಮ ವರ್ತನಾ ಪ್ರಪಂಚವನ್ನು ನಾವು ಸಂಪೂರ್ಣವಾಗಿ ಗೌರವಿಸಬೇಕು ಹಾಗೂ ಎಲ್ಲರನ್ನೂ ಅವರಷ್ಟಕ್ಕೇ ಬಿಡಬೇಕು, ಮನಸ್ಸಿನಲ್ಲಿ ಆಶೀರ್ವಾದ ಮಾಡಬೇಕು.
ನಮ್ಮ ಗಮನವನ್ನು ಯಾವ ಅಂಗಗಳು ಸಮರ್ಪಕವಾಗಿ ಇವೆಯೋ, ಅವುಗಳ ಜೀವಕೋಶಗಳ ಮೇಲೆ ಕೇಂದ್ರೀಕರಿಸಬೇಕು. ಆಗ ಯಾವ ಕಡೆ ಒತ್ತಡ ಹೆಚ್ಚು ಬೀಳುತ್ತಿತ್ತೋ ಅದು ಕಡಿಮೆಯಾಗುತ್ತದೆ. ದೈಹಿಕ ಕಾಯಿಲೆಗೆ ಮನಸ್ಸಿನಿಂದ ಅಲೋಚಿಸಿ ಪ್ರಕೃತಿ ಚಿಕಿತ್ಸೆ, ಆಹಾರ ವ್ಯತ್ಯಾಸ, ಗುಣ ಬದಲಾವಣೆ ಮಾಡುವಂಥದ್ದು ಮದ್ದು. ಮನಸ್ಸಿನಿಂದ ನಮಗೆ ಪರಿಹರಿಸಲಾಗದ್ದಕ್ಕೆ ಮನಸ್ಸು ಇಲ್ಲದೇ ಇರುವುದು - ಅಂದರೆ ದೇಹಕ್ಕೆ ಮಾತ್ರ ಗಮನ ಕೊಡುವುದು - ಯೋಗ, ಮೂಲಸ್ವರಗಳೊಂದಿಗೆ ಧ್ಯಾನ ಮಾಡುವುದು ಮದ್ದು.
ಯಾವ ಗುಣಗಳಿಂದ ಸಮಸ್ಯೆಯಾಗಲಿಲ್ಲವೋ ಆ ಗುಣಗಳಿಗೆ ಧನ್ಯವಾದ ಹೇಳಬೇಕು. ಆಗ ಯಾವ ಗುಣ ಹೆಚ್ಚಾಗಿದ್ದೋ ಆ ಹೆಚ್ಚಾದ ಗುಣ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಯಾವ ಕೆಲಸ ನಮಗೆ ಸಮಸ್ಯೆಯಾಗುತ್ತಿತ್ತೋ ಆ ಸಮಯದಲ್ಲಿ ಆ ಕೆಲಸದ ಬದಲು ಬೇರೆ ಸುಲಭವಾಗುವ ಮತ್ತೊಂದು ಕೆಲಸವನ್ನು ಮಾಡಲು ಪ್ರಯತ್ನಿಸಬೇಕು.
ಈ ದೇಹದಲ್ಲಿ ಇರುವ ಪರಮಾತ್ಮನ ತತ್ತ್ವವು ಕ್ವಾಂಟಂ ಸಿದ್ಧಾಂತದ ಪ್ರಕಾರ ಇದೆ. Matter = Energy, ವಸ್ತು ಮತ್ತು ಚೈತನ್ಯಕ್ಕೆ ಯಾವುದೇ ವ್ಯತ್ಯಾಸವಿಲ್ಲ ಅದು ಒಂದೇ, ಒಂದು ಮತ್ತೊಂದರಲ್ಲಿದೆ. ಅದ್ವೈತ. ಹಾಗಾಗಿ ನಮ್ಮ ಒಳಗೆ ಪರಮಾತ್ಮನ ಶಕ್ತಿ ಇದೆ ಎಂಬುದನ್ನು ನಾವು ಬಲವಾಗಿ ನಂಬಬೇಕು. ಧ್ಯಾನದ ಮೂಲಕ ನಾವು ಇದನ್ನು ಬಲವಾಗಿ ನಂಬಿದಷ್ಟೂ ನಮ್ಮ ಮೂಲಸ್ವರೂಪವನ್ನು ಎಲ್ಲಾ ಅಂಗಗಳು ಸ್ಮರಿಸುತ್ತವೆ ಮತ್ತು ಸುಲಭವಾಗಿ ನಾವು ಆರೋಗ್ಯವಂತರಾಗಿರುತ್ತೇವೆ. ನಮ್ಮ ದೇಹ ಆರೋಗ್ಯವಂತವಾಗಿರುತ್ತದೆ ಎಂಬ ಸಮಗ್ರ ದೃಷ್ಟಿ ಇರಬೇಕು ಹೊರತು ನಾವೇ ರೋಗವನ್ನು ದೊಡ್ಡದು ಮಾಡಿಕೊಳ್ಳಬಾರದು. ಏಕೆಂದರೆ ನಾವು ಭಾವಿಸದೇ ಇದ್ದಷ್ಟೂ ರೋಗ ಇರುವುದೇ ಇಲ್ಲ. ಜೀವನದ ಸಮಗ್ರತೆಯನ್ನು, ಮೂಲಸ್ವರೂಪವನ್ನು ಬಿಟ್ಟು ಅನ್ಯತರವಾದುದು ಇಲ್ಲ ಎಂದು ನಂಬಿದರೆ ದೇವರು ಎಲ್ಲಾ ರೋಗಗಳನ್ನು ನಿವಾರಣೆ ಮಾಡುತ್ತಾನೆ. ಇದು ಭಾರತೀಯ ವೈದ್ಯ ಪರಂಪರೆಯ, ನಮ್ಮ ಪ್ರಾಚೀನ ಋಷಿಮುನಿಗಳ ಅಮೂಲ್ಯ ಕೊಡುಗೆ ಮತ್ತು ಎಲ್ಲ ಕಾಲಗಳಲ್ಲೂ ವಿವಿಧ ರೂಪಗಳಲ್ಲಿ ಪ್ರಕಟವಾದ ಸುಜ್ಞಾನ. ಹಾಗಾಗಿ ಆರೋಗ್ಯವನ್ನು ಹೊಂದಿರುವುದು ಎಂದರೆ ಅಸ್ತಿತ್ವಕ್ಕೆ ಸಂಬಂಧಿಸಿ ಎಲ್ಲಾ ವಿಧದಲ್ಲಿ ಸಮತೋಲನವನ್ನು ಹೊಂದಿರುವುದು.
ಹಳೆಯ ದಿನಗಳಲ್ಲಿ ನೆಗೆಟಿವ್ ಬಳಸಿ ಫೋಟೋ ಪ್ರಿಂಟ್ ಹಾಕುವ ಪದ್ಧತಿಯಿತ್ತು. ಫೋಟೋ ಹಳತಾದಂತೆ ಕಂಡರೆ ಹೊಸದಾಗಿ ಪ್ರಿಂಟ್ ಹಾಕಿಕೊಳ್ಳುತ್ತಿದ್ದೆವು. ಪ್ರತಿಕ್ಷಣ ಬದಲಾಗುವ ಈ ದೇಹದಲ್ಲಿ ಚೈತನ್ಯದ ಅನುಸಂಧಾನ, ಆಂದೋಲನ ನಿರಂತರ... ಕ್ವಾಂಟಂ ಹೀಲಿಂಗ್ ಹೀಗೆಯೇ. ನಮ್ಮಲ್ಲಿ ಚೈತನ್ಯ ಅಂತರ್ಗತವಾಗಿರುತ್ತದೆ ಎಂದು ನಂಬುವುದು. ಸಮಗ್ರತೆ. ವಸ್ತು ಮತ್ತು ನಮ್ಮ ಒಳಗಿನ ವೇಗವಾದ ವಿವಿಧ ಚಲನೆಗಳಿಂದ ದ್ರವ್ಯರಾಶಿ ಮತ್ತು ಅದರಿಂದಲೇ ಚೈತನ್ಯವೂ ಇರುವುದು. ಅದರಿಂದಲೇ ಆರೋಗ್ಯವೂ ಕೂಡಾ. ಇದು ಆಶ್ಚರ್ಯವಲ್ಲ, ಸತ್ಯ. ಔಂ ಶಾಂತಿಃ...

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್