ನಾವು ಚೆನ್ನಾಗಿದ್ದೇವೆ
ನೀವೊಂದು ಮರದ ಬುಡವನ್ನು
ಅರ್ಧಂಬರ್ಧ ನೋಡುತ್ತೀರಿ
ಹಾಗೂ
ಅದು ಯಾವ ಹೂವು
ಯಾವ ಹಣ್ಣು ಬಿಡುವುದೆಂದು
ಅರ್ಧಂಬರ್ಧ
ಅರ್ಥ ಮಾಡಿಕೊಳ್ಳುವಿರಿ
ಎಂದಿರಲಿ.
ನೀವೀಗ ಮರದ ಬುಡವನ್ನು ಮಾತ್ರ
ನೋಡುತ್ತಿದ್ದೀರಿ -
ಅದೂ ಭಾಗಶಃ....
ಆಗಲೂ -
ನಿಮಗೆ ಗೊತ್ತಿಲ್ಲದ ನೂರೆಂಟು ಬೇರುಗಳು
ಆ ಮರಕ್ಕಿರುತ್ತವೆ
ಮತ್ತು ನೀವದನ್ನು ಕಾಣಲಾರಿರಿ
ಆ ಮರದ ಒಗಟನ್ನು ನೀವು ಎಳ್ಳಷ್ಟೂ
ಭೇದಿಸಲಾರಿರಿ
ಮರಗಳನ್ನು ಕತ್ತರಿಸುವುದು ಸುಲಭ
ಬೇರುಗಳ ವಿಷಯ ಕಷ್ಟ
ನೀವು ಕತ್ತರಿಸಿದರೂ ಬೇರುಗಳು
ಆಕಾಶದಷ್ಟು ಅನಂತಕ್ಕೆ ಇರುತ್ತವೆ
ಮತ್ತು ಅವು ನಿಮ್ಮ ದೃಷ್ಟಿಯೊಳಗೇ
ಬೇರು ಬಿಟ್ಟಿರುವವು.
ಮರಕ್ಕೆ ಬ್ರಹ್ಮಾಂಡದ ಬಹುತ್ವ
ನಾವು ನಾವೆಂದು ಬಹುವಚನ ಮಾತಾಡುವ
ತವಕ
ಅದೇನು ಇಂದ್ರಜಾಲವೋ ನಾನರಿಯೆ
ಸದಾ ನಾವೆಲ್ಲರೂ ಚೆನ್ನಾಗಿದ್ದೇವೆ...
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment