ಹಿಂದೂ ಧರ್ಮಪ್ರಜ್ಞೆ ಮತ್ತು ಋಷಿವಾಕ್ಯಗಳ ಪ್ರಸ್ತುತತೆ

ಬಹಳ ದಿನಗಳಿಂದ ಉಪನಿಷತ್ತುಗಳ ಬಗ್ಗೆ ಏನಾದರೂ ಚೂರು ಬರೆಯಬೇಕೆಂದು, ಮಾತಾಡಬೇಕೆಂದು ಬಯಸಿದ್ದೆ. ಈಗ ಅದನ್ನು ಬರೆಯುತ್ತಿದ್ದೇನೆ ಹಾಗೂ ಮಾತಾಡುತ್ತಿದ್ದೇನೆ.
ಧರ್ಮದ ಆಚರಣೆಗಾಗಿ ಇರುವ ಶಾಸ್ತ್ರಗಳು ಒಂದು ಬಗೆಯಾದರೆ, ಅರಿವಿಗೆ ಸಂಬಂಧಿಸಿದ ಧರ್ಮಗ್ರಂಥಗಳು ಮತ್ತೊಂದು ಬಗೆ. ಭಾರತೀಯ ಹಿಂದೂ ಧರ್ಮದ ಅತೀ ಮುಖ್ಯ ಭಾಗವಾಗಿರುವ ಉಪನಿಷತ್ತುಗಳು ಜಗತ್ತಿನ ಉತ್ಕೃಷ್ಟ ತಾತ್ತ್ವಿಕ ಧರ್ಮಗ್ರಂಥಗಳಾಗಿವೆ.
ಹಿಂದೂ ಧರ್ಮಗ್ರಂಥಗಳಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ಮಹಾಕಾವ್ಯಗಳು ಸೇರಿವೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವವೇದ ಎಂಬ ನಾಲ್ಕು ವೇದಗಳಿವೆ. ವೇದಗಳ ಕೊನೆಯ ಭಾಗವನ್ನು ಉಪನಿಷತ್ತುಗಳು ಅಥವಾ 'ವೇದಾಂತ' ಎಂದು ಕರೆಯುವರು. ಐತರೇಯ, ಬೃಹದಾರಣ್ಯಕ, ಈಶಾವಾಸ್ಯ, ತೈತ್ತಿರೀಯ, ಛಾಂದೋಗ್ಯ, ಕೇನ, ಮುಂಡಕ, ಮಾಂಡೂಕ್ಯ, ಕಠ, ಪ್ರಶ್ನೆ, ಶ್ವೇತಾಶ್ವತರ - ಇವು ಹನ್ನೊಂದು ಪ್ರಮುಖ ಉಪನಿಷತ್ತುಗಳು. ಒಟ್ಟು 18 ಪುರಾಣಗಳು ಹಿಂದೂ ಧರ್ಮದಲ್ಲಿವೆ. ಅವುಗಳೆಂದರೆ ವಿಷ್ಣುಪುರಾಣ, ನಾರದ ಪುರಾಣ, ಶ್ರೀಮದ್ ಭಾಗವತ ಪುರಾಣ, ಗರುಡ ಪುರಾಣ, ಪದ್ಮಪುರಾಣ, ವರಾಹ ಪುರಾಣ, ಬ್ರಹ್ಮ ಪುರಾಣ, ಬ್ರಹ್ಮಾನಂದ ಪುರಾಣ, ಬ್ರಹ್ಮ ವೈವರ್ತ ಪುರಾಣ, ಮಾರ್ಕಂಡೇಯ ಪುರಾಣ, ಭವಿಷ್ಯ ಪುರಾಣ, ವಾಮನ ಪುರಾಣ, ಮತ್ಸ್ಯ ಪುರಾಣ, ಕೂರ್ಮ ಪುರಾಣ, ಲಿಂಗ ಪುರಾಣ, ಶಿವ ಪುರಾಣ, ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣ. ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಮಹಾಕಾವ್ಯಗಳಿವೆ. ಹಿಂದೂ ಧರ್ಮದ ಇನ್ನಿತರ ಗ್ರಂಥಗಳಲ್ಲಿ ಪ್ರಮುಖವಾದುದು ಭಗವದ್ಗೀತೆ. ಇದು ಹಿಂದೂಗಳ ಪವಿತ್ರ ಗ್ರಂಥವೆಂದು ಮಾನ್ಯವಾಗಿದೆ.
ಈಗ ವೇದಗಳ ವಿಚಾರಕ್ಕೆ ಬರೋಣ. ವೇದಗಳ ಉದ್ದೇಶ ದೇವತೆಗಳನ್ನು ಪ್ರಾರ್ಥಿಸುವುದು ಹಾಗೂ ಪ್ರಸನ್ನಗೊಳಿಸುವುದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ - ಈ ನಾಲ್ಕನ್ನು ಜೀವನದ ಪುರುಷಾರ್ಥಗಳೆಂದು ಹೇಳಲಾಗಿದೆ. ಎಲ್ಲವನ್ನೂ ಧಾರ್ಮಿಕ ಉಪಾಸನೆಯ ಮೂಲಕ ಪಡೆಯಲಿಕ್ಕಾಗಿ ವೇದಗಳು ಇವೆ. ಸಗುಣೋಪಾಸನೆಯ ಮೂಲಕ ಅರ್ಚಿಸಲಿಕ್ಕಾಗಿ, ಯಜ್ಞ - ಯಾಗಗಳ ಮೂಲಕ ಪ್ರಾರ್ಥಿಸಲಿಕ್ಕಾಗಿ ಹಲವಾರು ದೇವತೆಗಳ ಕಲ್ಪನೆಯನ್ನು ವೇದಗಳಲ್ಲಿ ಕಟ್ಟಿಕೊಡಲಾಗಿದೆ. ಇದು ಒಂದು ಹಂತದ ತನಕ ಲೋಕಕಲ್ಯಾಣಕ್ಕಾಗಿ ಪಾಲಿಸಬೇಕಾದ ಧರ್ಮದ ಮಾರ್ಗ ಅಥವಾ ವಿಧಾನ. ಮಂತ್ರ, ತಂತ್ರ, ಯಂತ್ರಗಳ ಮೂಲಕ ವೈವಿಧ್ಯಮಯವಾಗಿ ಉಪಾಸನೆ ಮಾಡಿ ಫಲಾಪೇಕ್ಷೆಗಳನ್ನು ಈಡೇರಿಸಲು ಇಲ್ಲಿ ಅವಕಾಶ ಇದೆ. ಇದರ ಮುಖ್ಯ ನೆಲೆ ದೈವಬಲದ ಮೇಲಿನ ನಂಬಿಕೆ, ವಿಶ್ವಾಸ.
ಉಪನಿಷತ್ತುಗಳ ಅಧ್ಯಯನ ಮಾಡುವುದು ಧಾರ್ಮಿಕ ಅಧ್ಯಯನದ ಪ್ರಮುಖ ಭಾಗ. ಏಕೆಂದರೆ ಉಪನಿಷತ್ತುಗಳು ಸಾರುವುದು ಪರಮ ಸತ್ಯವನ್ನು. ಯಾವುದು ಶಾಶ್ವತವೋ, ಆ ಅನಂತದ ಬಗ್ಗೆ, ಸತ್-ಚಿತ್-ಆನಂದ ಸ್ವರೂಪಿಯಾದ ಪರಮಾತ್ಮನ ಬಗ್ಗೆ, ಬ್ರಹ್ಮದ ಬಗ್ಗೆ ಉಪನಿಷತ್ತುಗಳು ಹೇಳಿವೆ. ಇಲ್ಲಿ ಉಪಾಸನೆಯ ವಿಷಯ ಬರುವುದಿಲ್ಲ. ಅರಿವಿಗೆ ಮಹತ್ವ. ಹಾಗಾಗಿ ಕೇವಲ ತಪಸ್ಸು ಮಾತ್ರ. ಇದು ದೇವರೆಂದರೆ ಏನು? ಎಂಬುದರ ಬಗ್ಗೆ ಅರಿವು. ಹಾಗಾಗಿ ಇಡೀ ಹಿಂದೂ ಧರ್ಮವು ನಾಮರೂಪದ ಈ ಜಗತ್ತಿನಲ್ಲಿ ಕಾಣುವ ಸರ್ವಸ್ವವೂ ಒಂದೇ - ಆದರೆ ಅದರ ಮಹಿಮೆ, ರೂಪಗಳು ಅನಂತ ಎಂದು ಸಾರುತ್ತದೆ. ಇದೇ ವಿಚಾರವು ಭಗವದ್ಗೀತೆಯ ವಿಶ್ವರೂಪ ದರ್ಶನ ಭಾಗದಲ್ಲೂ ವ್ಯಾಖ್ಯಾನಿಸಲ್ಪಟ್ಟಿದೆ.
ಉಪನಿಷತ್ತುಗಳು ಕೇವಲ ಒಂದು ಮತ ವಿಚಾರದಂತೆ ಇರದೆ, ನಿಜವಾದ ಬ್ರಹ್ಮೋಪದೇಶದಂತೆ ಇದೆ. ಆ ಬ್ರಹ್ಮವು ನಿನ್ನೊಳಗೆಯೇ ಇದೆ, ಅದೇ ಬ್ರಹ್ಮದ ವ್ಯಾಪ್ತಿ ಎಲ್ಲೆಡೆಯೂ ಇರುವಂಥದ್ದು - ಎಲ್ಲವೂ ಬ್ರಹ್ಮವೇ ಎಂದು ಉಪನಿಷತ್ತುಗಳು ಕಾವ್ಯಾತ್ಮಕವಾಗಿ ಹೇಳುತ್ತವೆ. ನಾವು ನಮ್ಮ ಜೊತೆಗೇ ವರ್ತಿಸುವ ಅದ್ಭುತ ಪ್ರಪಂಚವಿದು!
ಹಿಂದೂ ಧರ್ಮಗ್ರಂಥಗಳಲ್ಲಿ ಈ ಬಗೆಯ ಪರಮ ಜ್ಞಾನವಿದೆ. ಪುರಾಣಗಳು, ಮಹಾಕಾವ್ಯಗಳ ಕಲ್ಪನೆ ನಮ್ಮಲ್ಲಿನ ನಂಬಿಕೆಗೆ ಆಧಾರವಾಗಬಹುದು. ಆದರೆ ನಾವು ಅಂಧರಂತಿರದೆ, ಅನ್ವೇಷಕರಾಗಿರಬೇಕು. ಉಪನಿಷತ್ತುಗಳು, ವೇದಗಳ ಹಿಂದಿನ ಸಾರ - ಸೂಕ್ತಗಳ ಕಡೆಗೆ, ಪುರಾಣಗಳು, ಮಹಾಕಾವ್ಯಗಳು ಒಳಗೊಂಡಿರುವ ಸಾಂಕೇತಿಕ ಅರ್ಥವ್ಯಾಪ್ತಿ ಅಂದರೆ ಮಿಥ್‌ಗಳ ಬಗ್ಗೆ ತಿಳಿಯಲು ಅಧ್ಯಯನಶೀಲನು ಕುತೂಹಲಿಯಾಗಿ ಪ್ರಯತ್ನ ಮಾಡಲೇಬೇಕು.
ವೇದಗಳಷ್ಟೇ ಹಳೆಯದಾಗಿರುವ ಈ ಉಪನಿಷತ್ತುಗಳಲ್ಲಿ ಅಖಂಡವಾದ, ಅಸೀಮವಾದ ಬ್ರಹ್ಮದ ಬಗ್ಗೆ, ವಿಶ್ವದ ಬಗ್ಗೆ ಹೇಳಲಾಗಿದೆ. ಅರಿವನ್ನು ಪಡೆಯಬಯಸುವ ಶಿಷ್ಯನು ಗುರುವಿನೊಂದಿಗೆ ಸಂವಾದಿಸುವ ರೂಪದ ಅನೇಕ ಕಥೆಗಳು ಇವೆ. ಇವುಗಳಲ್ಲಿ ಅಸಲಿಯಾಗಿ ಅಧ್ಯಾತ್ಮದ ವಿಚಾರವಿದೆ. ಇವುಗಳ ಪ್ರಾಚೀನತೆಯನ್ನು ಗಮನಿಸಿದರೆ ಆಧುನಿಕ ವಿಜ್ಞಾನದಲ್ಲಿ ಹೇಳುವ ಅನೇಕ ಸಿದ್ಧಾಂತಗಳಿಗೆ ಇದುವೇ ಮೂಲದಂತಿದೆ.
ವಿಜ್ಞಾನದ ಅತೀ ದೊಡ್ಡ ಸಿದ್ಧಾಂತಗಳು ಮತ್ತು ಪರಿಕಲ್ಪನೆಗಳಾದ ಸಮಾನಾಂತರ ಬ್ರಹ್ಮಾಂಡ, Law of conservation of energy, Quantum mechanics, Matter = Energy ಅಥವಾ A-Duality ಅಥವಾ ಅದ್ವೈತ ದರ್ಶನ, Time travel, ಮನೋವಿಜ್ಞಾನ, Quantum healing, ಯೋಗಶಾಸ್ತ್ರ ಮತ್ತು ವೈದ್ಯವಿಜ್ಞಾನ, ಗಣಿತಶಾಸ್ತ್ರ - ಹೀಗೆ ಎಲ್ಲಾ ಜ್ಞಾನವನ್ನೂ ಒಂದರೊಳಗೇ ನೋಡುವಂತಿದ್ದರೆ ಅದು ಈ ವೇದಾಂತ ಅಥವಾ ಉಪನಿಷತ್. ಸೃಷ್ಟಿಯ ರಹಸ್ಯವನ್ನು ತಿಳಿಸುವ ಇತ್ತೀಚಿನ ವೇದಿಕ್ ರಶ್ಮಿ ಸಿದ್ಧಾಂತಕ್ಕೆ ಕೂಡಾ ವೇದ - ಉಪನಿಷತ್ತುಗಳೇ ಆಧಾರ.
ಹಿಂದೂ ಧರ್ಮಪ್ರಜ್ಞೆಯು ಒಂದು ನೈಜ ಸತ್ಯದರ್ಶನವಾದ್ದರಿಂದ ಇದರ ಒಳ್ಳೆಯ ಅಂಶಗಳು ಇಂದು ಜಗದ್ವಿಖ್ಯಾತವಾಗಿವೆ. ಈ ಋಷಿಮೂಲವಾದ ವಿಚಾರಗಳು ಸಂಕುಚಿತ ಉದ್ದೇಶಗಳಿಗೆ ಸೀಮಿತವಾಗಿಲ್ಲ. ಅಲ್ಲದೆ, ಅದು ಪರಮಶಕ್ತಿಯಿಂದ ಅನುಗ್ರಹಿಸಲ್ಪಟ್ಟು ಜಗತ್ತಿನ ಎಲ್ಲ ಆಲೋಚನೆ, ಶೋಧನೆ, ಆಯಾಮಗಳಲ್ಲಿ ಸೇರಿಕೊಂಡಿದೆ. ಋಷಿಯಂತೆ ಧ್ಯಾನಿಸಿದರೆ 'ಅಹಂ ಬ್ರಹ್ಮಾಸ್ಮಿ' ಎಂಬ ಅನುಭಾವ ಮೂಡುತ್ತದೆ.  ನೂರಾರು ಪಂಥ, ಷಡ್-ದರ್ಶನಗಳಿದ್ದರೂ, ಎಲ್ಲವೂ ಬ್ರಹ್ಮವೇ. ಒಟ್ಟಿನಲ್ಲಿ ಸನಾತನ ಧರ್ಮವು 'ಹಿಂದೂ' ಎಂಬ ಒಂದು ಪದಕ್ಕಷ್ಟೇ ಸೀಮಿತವಲ್ಲ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Post a Comment

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್