ಅನಂತ ಅನುಗ್ರಹ, ಅಪರಿಮಿತ ಪ್ರೀತಿ.... ಇದು ಬ್ರಹ್ಮಾಂಡದ ಪರಮ ಕೃಪೆ, ಶಕ್ತಿ!

ಲೋಕ ನಡೆಯುತ್ತಿರುವುದು ಅಗಾಧವಾದ ಅನುಗ್ರಹದಿಂದ ಮಾತ್ರ! ಇಲ್ಲಿ ಭೂಮಿ ಮತ್ತು ಚಂದ್ರನ ನಡುವಿನ ದೂರ, ಭೂಮಿ ಮತ್ತು ಸೂರ್ಯನ ನಡುವಿನ ದೂರ, ಚಲನೆಗಳು, ವಿವಿಧ ಆಕಾಶಕಾಯಗಳಿಗೆ ಇರುವ ದ್ರವ್ಯರಾಶಿ, ಗುರುತ್ವ ಇವೆಲ್ಲ ಈ ಅನುಭವದ ಕೇಂದ್ರವಾಗಿರುವ 'ನಾನು' ಬದುಕುವುದಕ್ಕೆ ಎಷ್ಟೊಂದು ಪರ್ಫೆಕ್ಟ್ ಆಗಿ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ! ಅದಕ್ಕಾಗಿ ನನ್ನ ಅನಂತ ಕೃತಜ್ಞತೆಗಳು.
ಹೌದು. ಭೌತಶಾಸ್ತ್ರದ ಕ್ವಾಂಟಮ್ ಫಿಸಿಕ್ಸ್‌ಗೆ ಇಲ್ಲಿ ಅಷ್ಟೊಂದು ಮಹತ್ವವಿದೆ. ಎಲ್ಲಾ ಮೂಲವಸ್ತುಗಳ, ಪದಾರ್ಥಗಳ, ಯೌಗಿಕಗಳ, ಎಲ್ಲಾ ರೂಪರೂಪಗಳ ಹಿಂದೆಯೂ ಇಂತಹ ಒಂದು ಚೈತನ್ಯದ ಮಹಾಪ್ರವಾಹವೇ ಇದೆ. ಪ್ರತಿಯೊಂದು ಇಲೆಕ್ಟ್ರಾನ್ ಇಲ್ಲಿ ಸ್ಥಾನಪಲ್ಲಟವಾಗುತ್ತಾ ಚೇತನವು ವಿವಿಧ ಚೈತನ್ಯದ ರೂಪಗಳಾಗಿರುತ್ತಾ ಒಟ್ಟು ಶಕ್ತಿ ಒಂದೇ ಆಗಿರುವ, ಹಾಗಿದ್ದರೂ ಅದರ ಪ್ರಮಾಣ ಅಪರಿಮಿತ, ಅನಂತ ಆಗಿರುವ ರೋಚಕ ವ್ಯವಸ್ಥೆ ಇದು. ಇಲ್ಲಿ 'ತಾನು' ಎಂದು ಭಾವಿಸುವಲ್ಲಿ ಮಾತ್ರ ತಾನು ಇರಬಲ್ಲೆ ಎಂಬುದು ಹೊಳೆಯಲೇ ಬೇಕು. ಏಕೆಂದರೆ ಇಂತಹ ಇರುವಿಕೆ ಅದ್ಭುತ ಕನಸಲ್ಲಿ ಮಾತ್ರ ಸಾಧ್ಯ! ಅದಕ್ಕೆ ಇದು ಅಂತಹ ಮಹಾನ್ ಮಹಾನ್ ಕನಸು!
ನಾವು ಕನಸು ಎನ್ನುವುದು ಏನನ್ನು? ಹುಲಿಯೊಂದು ಆಕಾಶಕ್ಕೆ ಜಿಗಿದಂತೆ ಕಾಣುವ ಘಟನೆ - ಅಸಂಬದ್ಧವೂ, ಅಸಂಭವವೂ ಎನಿಸುವಂತಿದ್ದರೆ ಅದು ಕನಸಲ್ಲಿ ಮಾತ್ರ ಎನ್ನುತ್ತೇವೆ. ಅಂದರೆ ತುಂಬಾ ವಿಚಿತ್ರವಾದುದನ್ನು, ಪವಾಡದಂತಿರುವುದನ್ನು ನಾವು ಕನಸು ಎನ್ನುತ್ತೇವೆ ಮತ್ತು ಅಂಥದ್ದು ಕನಸಲ್ಲಿ ಮಾತ್ರ ನಡೆದೀತು ಎಂಬುದು ನಮ್ಮ ಭಾವನೆ. ನಮ್ಮ ಭೂಮಿ ನಿಂತಿರುವುದೇ ಸತ್ಯದ ಮೇಲೆ ಎನ್ನುತ್ತಾರೆ. ಅದು ನಂಬಿದರೆ ಉಂಟು, ಮತ್ತೆ ಮತ್ತೆ ಒಳಗೊಳಗೆ ಮತ್ತೊಂದು ಕೇಂದ್ರವಿದೆ ಎನ್ನುವ ಬಗೆಯ ನಿರಂತರ ಓಟ. ಈ ಅನಂತದಲ್ಲೂ ಕಾಣುವಷ್ಟರಲ್ಲಿ ಒಂದು ಪರ್ಫೆಕ್ಟ್ ಆಗಿರುವ ಲೆಕ್ಕಾಚಾರವಿದೆ. ಕಾಣದಿರುವುದರಲ್ಲೂ ಪರ್ಫೆಕ್ಟ್ ಲೆಕ್ಕಾಚಾರ ಇದೆ.  ಅದು ನಿಂತಿರುವುದು ಅದಾರಚೆಗಿನ ಬ್ರಹ್ಮಾಂಡದ ಪರಮ ಪರಮ ಆಶ್ಚರ್ಯಕರವಾದ ಸತ್ಯದ ಆಧಾರದ ಮೇಲೆ ಎಂದೇ ಹೇಳಬೇಕು ಮತ್ತು ಆ ಅದ್ಭುತ ಸೋಜಿಗಕ್ಕೆ, ಕೊಡುಗೆಗೆ, ಕೃಪೆಗೆ ಆ ಆಕಾಶತತ್ತ್ವಕ್ಕೆ ಕೃತಜ್ಞವಾಗಿರಲೇ ಬೇಕು. ಆದರೆ ಏನೂ ಕಾಣಲಾಗದ ಅನಂತದಲ್ಲಿ ನನಗೆ ದೊಡ್ಡದೇ ಆಗಿರುವ ನಾನು ಎಂಬುದು ಬಂದು ಅನುಭವ ಪಡೆಯಬೇಕಾದರೆ ಅದಕ್ಕೆ ಮಾಡಿಟ್ಟ ಬದುಕಿನ ಖಗೋಳದ ವ್ಯವಸ್ಥೆಯಲ್ಲಿ ಅದ್ಭುತವಾದ ಕೃಪೆಯೊಂದು ನೂರಕ್ಕೆ ನೂರು ಶೇಕಡಾ ಇದೆ. ಈ ಕಾಸ್ಮಸ್ ಅಷ್ಟೊಂದು ಕ್ರಮಬದ್ಧವಾಗಿದೆ. ಪ್ರತಿಯೊಂದು ಅಣುವಿನ 99.999999% ಖಾಲಿಯಾಗಿದೆ. ಆಕಾಶ, empty, space, ಏನೂ ಇಲ್ಲ ಎನ್ನುವುದರಲ್ಲೇ ನಾವು ಇರುವಿಕೆಯನ್ನು ಹೊಂದಿದ್ದೇವೆ. ಆ ಬ್ರಹ್ಮಾಂಡದ ಅನುಗ್ರಹ ಎಷ್ಟು ಇದೆ ಎಂದರೆ ಬ್ರಹ್ಮಾಂಡದಲ್ಲಿ ಇರುವ ಎಲ್ಲವೂ ನಮಗೆ ಬೇಕಾಗಿಯೇ ಇದೆ ಎಂಬಂತೆ ಬಹಳ, ಬಹಳ ಪರ್ಫೆಕ್ಟ್ ಇದೆ. ಜೀವನದ ಎಲ್ಲಾ ಕೊಡುಗೆಗಳು, ಅದು ಹೇಗೆಯೇ ಇರಲಿ, ಬಹಳ ಪರ್ಫೆಕ್ಟ್ ಆಗಿಯೇ ಇರುತ್ತವೆ. ಆ ಕೊಡುಗೆಯಿಲ್ಲದಿದ್ದರೆ ಹುಟ್ಟಿರುವ ಜೀವಿ ಬದುಕಿರಲಾಗಲೀ, ಉಸಿರಾಡಲಾಗಲೀ, ತಿಂದದ್ದನ್ನು ದಹನ ಮಾಡಲಿಕ್ಕಾಗಲೀ ಏನೂ ಸಾಧ್ಯವಿಲ್ಲ. ಅಂದರೆ ನಮ್ಮ ಹುಟ್ಟಿನಿಂದ ನಾವು ಅನುಭವಿಸುವ ಎಲ್ಲವೂ ಚೈತನ್ಯರೂಪಿಯಾದ ಪರಮಾತ್ಮನ ಅನಂತಾನಂತ ಚೇತನದ ಕೃಪೆಯಿಂದಲೇ ಆಗುತ್ತದೆ. ಈ ವಿಶ್ವದ ಅಗಾಧ ಅನುಗ್ರಹದ ಅರಿವು, ಸಾಕ್ಷಾತ್ಕಾರ ಆಗದಿದ್ದರೆ ಮನುಷ್ಯನ ಬದುಕು ವ್ಯರ್ಥವೇ ಸರಿ.
ಅನಂತವಾದ ವಿಶ್ವ ಇದು. ಇದಕ್ಕೊಂದು ಚೌಕಟ್ಟೇ ಇಲ್ಲ. ಮೇಲೆ ಆಕಾಶಕ್ಕೆ ತಿರುಗಿ ನೋಡಿದರೆ ನಾವು ನೋಡುವಷ್ಟನ್ನು ನೋಡುತ್ತೇವಲ್ಲದೆ ಅದರಾಚೆ ಅದು ಸುತ್ತಲೂ ವ್ಯಾಪಕವೇ ಆಗಿ ವಿಸ್ತರಿಸಿಕೊಂಡಿದೆ. ನಮ್ಮ ಅನುಭವ ಪಂಚೇಂದ್ರಿಯಗಳ ಮೂಲಕ ಆಗಿರುತ್ತಾ ನಾವು ಇನ್ನೆಲ್ಲಿ ನೋಡಿದರೂ ಕಾಣಬಹುದಾದದ್ದು ಮತ್ತು ಅನುಭವಿಸಬಹುದಾದದ್ದು ನಮ್ಮ ಭೂತಕಾಲ ಅಥವಾ ಭವಿಷ್ಯತ್‌ಕಾಲದ ಎನ್ನಬಹುದಾದ ನಮ್ಮ ರೂಪಗಳನ್ನೇ ಆಗಿರುತ್ತದೆ. ಅನಂತ ವಿಶ್ವವೊಂದು ಅಪರಿಮಿತವಾದ ಚೈತನ್ಯ ಅಥವಾ ಬೆಳಕಿನ ವಿಧವಿಧವಾದ ರೂಪಾಂತರಗಳ ಬಹುವಿಸ್ತೃತವಾದ, ಅನಂತವಾದ, ಚೌಕಟ್ಟೇ ಇಲ್ಲದ ಆಕಾಶ. ಅನಂತಕ್ಕೆ ಕೇಂದ್ರ ಎಂಬುದು ಇಲ್ಲ ಅಥವಾ ಅನುಭವವನ್ನು ಅನುಭವಿಸುವವನು ಇಲ್ಲಿ ಯಾರೋ ಅವನೇ ಕೇಂದ್ರ. ಅಂದರೆ ಈ ಲೇಖನವನ್ನು ಬರೆಯುತ್ತಿರುವ ನನಗೆ ಸಂಬಂಧಿಸಿದರೆ 'ನಾನು' ಎಂಬ ಆತ್ಮವೇ ಪರಮಾತ್ಮನ ರೂಪವಾಗಿ ಕೇಂದ್ರ. ಆ ಆತ್ಮ ಪ್ರಕಾಶರೂಪವಾಗಿ, ಅದನ್ನು ನಾನು ಹುಟ್ಟಿನಿಂದ ಪಡೆದ ಪ್ರಜ್ಞೆ, ಮನಸ್ಸು, ಬುದ್ಧಿ, ಇಂದ್ರಿಯಗಳು ಇಂಥದ್ದರಿಂದ ಅನುಭವಿಸುವಾಗ ಒಂದು ತಿಳಿದಿರಬೇಕು. ನಮಗೆ ಈ ಭೂಮಿಯಲ್ಲಿ ಬದುಕನ್ನು ಅನುಭವಿಸಲು ಏನೆಲ್ಲಾ ಬೇಕೋ ಅದು ಕೊಡಲ್ಪಟ್ಟಿದೆ ಅಥವಾ ನಾವದನ್ನು ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ಪಡೆಯುತ್ತಾ ಜನಿಸಿ ಬದುಕುತ್ತಿದ್ದೇವೆ ಅಷ್ಟೇ. ಅದು ನಮ್ಮ ಪಂಚಭೂತಗಳಿಂದ ಉಂಟಾದದ್ದು. ಅದು ಈ ಸೌರವ್ಯೂಹದ ಭೂಮಿಗೆ ಸಂಬಂಧಿಸಿ ಮಾತ್ರ. ಇನ್ನು ಆಕಾಶ ಅಥವಾ ಸ್ಪೇಸ್‌ನ ಕೊಡುಗೆ ಸಾಮಾನ್ಯವಾದುದಲ್ಲ. ಪರಮ, ಪರಮ ಅನುಗ್ರಹವಿದೆ. ಅದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಈ ಸೌರವ್ಯೂಹದಲ್ಲೇ ವಿವಿಧ ಗ್ರಹಗಳ ನಡುವಿನ ಅಂತರ, ಸೂರ್ಯ, ಗ್ರಹ, ಉಪಗ್ರಹಗಳು, ಆಕಾಶದ ವಿವಿಧ ವಲಯಗಳು, ಭೂಮಿಯ ವ್ಯವಸ್ಥೆ ಇವೆಲ್ಲ ಎಷ್ಟೊಂದು ಪರ್ಫೆಕ್ಟ್ ಇದೆ. ಇಲ್ಲಿ ನಿರುಪಯುಕ್ತದಂತೆ ಕಾಣಬಹುದಾದ ಒಂದು ಕಣಕ್ಕೂ, ಕಸಕ್ಕೂ ಕೆಲಸವಿದೆ ಎಂಬುದನ್ನು ನೋಡಿ. ಅದೇ ತಾಯಿಯಂತಿರುವ, ಮಾತೃಸ್ವರೂಪಿಯಾದ ಚಂದ್ರ. ಚಂದ್ರನಿಗೇನು ಕೆಲಸ ಭೂಮಿಯಲ್ಲಿ? ಅವನಿಗೆ ಸ್ವಂತ ಬೆಳಕಿಲ್ಲ. ಅದು ಉರಿದು ಮುಗಿದ ಒಂದು ಬೂದಿಯ ಕಣದಂತೆ ಒಂದು ಆಕಾಶಕಾಯವಷ್ಟೇ ಎಂದು ನಾವು ಹೇಳಿದರೆ ಅದು ಶುದ್ಧ ತಪ್ಪು. ಏಕೆಂದರೆ ಚಂದ್ರನಿಲ್ಲದಿದ್ದರೆ ನಾವೇ ಇರಲಾರೆವು. ಖಗೋಳ ವಿಜ್ಞಾನದ ಸಂಶೋಧನೆಯ ಪ್ರಕಾರ ಚಂದ್ರ ಭೂಮಿಯ ಒಂದು ಭಾಗವಾಗಿದ್ದು ಅದು ಭೂಮಿಯ ಗುರುತ್ವಾಕರ್ಷಣೆಯಿಂದ ಆಧರಿಸಲ್ಪಟ್ಟಿದೆ. 28 ದಿನಗಳ ಒಂದು ಋತುಚಕ್ರದ ಅವಧಿಯಲ್ಲಿ ಒಂದು ಸುತ್ತು ಬರುವ ಚಂದ್ರನು ಭೂಮಿಯ ಎಲ್ಲ ಋತು ಬದಲಾವಣೆಗೆ ಕಾರಣ. ಆತನನ್ನು ಮನಃಕಾರಕ ಎಂದೂ ಹೇಳುತ್ತಾರೆ. ಚಂದ್ರನ ಭಾರದಿಂದ ಭೂಮಿ ಈಗ ಇರುವ ಸ್ಥಿತಿಯಲ್ಲಿ, ಅಂದರೆ ಸ್ವಲ್ಪ ಓರೆಯಾಗಿದ್ದು, ನಮ್ಮ ಬದುಕಿಗೆ ಬೇಕಾದ ರೀತಿಯಲ್ಲಿ ಶೀತೋಷ್ಣ, ಮಳೆ, ಬೆಳಕು, ಭರತ, ಇಳಿತ - ಇನ್ನೂ ಹಲವನ್ನು ಬದುಕಿಗೆ ಬೇಕಾದಂತೆಯೇ ಪಡೆಯಲು ಚಂದ್ರ ರೆಗ್ಯುಲೇಟರ್‌ನಂತೆ ನಮ್ಮ ಜೀವನಾಧಾರವಾಗಿದೆ. ಒಂದು ಕೈಯಲ್ಲಿ ನಮ್ಮನ್ನು ಮಗುವಿನಂತೆ ಹೊತ್ತುಕೊಂಡು ತಿರುಗುವ ಭೂಮಿ ತನ್ನ ತೂಕವನ್ನು ನಮಗೆ ಬೇಕಾದ ಜೀವವ್ಯವಸ್ಥೆಗೆ ಸರಿ ಮಾಡಲಿಕ್ಕಾಗಿ ಅಗತ್ಯವಾದದ್ದೆಲ್ಲವನ್ನೂ ತನ್ನ ತಲೆಯಲ್ಲಿ, ಹೆಗಲಲ್ಲಿ, ಸೊಂಟದಲ್ಲಿ, ಶಿರದಲ್ಲಿ ಹೊತ್ತು ತಿರುಗುತ್ತಿರುವಂತಿದೆ ಈ ವಿಚಿತ್ರ - ಇಲ್ಲಿ ಭಾಸವಾದದ್ದಕ್ಕೆ ಕೇಂದ್ರ ನಾವೇ - ಏಕೆಂದರೆ ಅನುಭವ ನನ್ನದೇ ಎಂದರೆ ನನ್ನದು. ಹೊರಗೆ ಹುಡುಕುವ ಎಲ್ಲ ಚೇತನಗಳೂ ಅವಸ್ಥಾಂತರದಲ್ಲೇ ನಾನು. ಅವುಗಳಿರುವುದಕ್ಕೆ ಹೇಗೆ ನೀನಿರುವೆಯೋ ಹಾಗೆಯೇ ನಿನ್ನ ಅನುಭವವಿರುವುದಕ್ಕಾಗಿಯೇ ಅವೆಲ್ಲವೂ ಇವೆ ಎಂದು ನಿನ್ನ ಅರ್ಥಗ್ರಹಣಕ್ಕೆ ತಿಳಿಯುತ್ತಿದೆ. ಹಾಗಾಗಿ  ಈ ಅಚ್ಚರಿ ಒಂದು ಬೃಹತ್ ಕನಸು. ಈ ಭೂಮಿಯ ಆಚೆ ಕಾಣುವ ನಮ್ಮ ಹತ್ತಿರದ ನಕ್ಷತ್ರವಾದ ಸೂರ್ಯ ಮೇಲೆ ನೋಡಿದರೆ ಆಕಾಶದಲ್ಲಿ ಇರುವಂತೆ ಕಂಡರೂ ಅದು ಯಾರು ನಿಮಗೆ ಗೊತ್ತಾ? ನಮ್ಮ ಈ ಸ್ವರೂಪ ಪಡೆಯಲಿಕ್ಕೆ ಈ ಗೇಲಕ್ಸಿಯಲ್ಲಿ ಇರುವ ನಮಗೆ ನೇರ ಸಂಬಂಧವಿರುವ ಎಲ್ಲಾ ಎನರ್ಜಿ ನೀಡುತ್ತಿರುವ ಮೂಲ ಎನ್ನಬಹುದು. ಸೌರಮಂಡಲದ ಗ್ರಹಗಳಲ್ಲಿ ಈ ಚೈತನ್ಯದ ಬೆಳಕಿನ ಸೂರ್ಯನಿಗೆ ಹೆಚ್ಚು ದ್ರವ್ಯರಾಶಿ, ಅಗಾಧ ಗುರುತ್ವವಿರುವುದರಿಂದ ಅವನ ಸುತ್ತಲಾಗಿ ಉಳಿದದ್ದೆಲ್ಲ ತಿರುಗುತ್ತಿದೆ. ಈ ಸೌರವ್ಯೂಹವಿರುವಂತೆ ನೂರೆಂಟು ಸೌರವ್ಯೂಹಗಳು ಇದೇ ಗ್ಯಾಲಕ್ಸಿಯಲ್ಲಿರಬಹುದು. ಹಾಗೆಯೇ ಇಂತಹ ನೂರೆಂಟು ಕೋಟಿ ಗೇಲೆಕ್ಸಿಗಳೂ ಕೂಡಾ ಅವುಗಳೊಳಗೆ ಹೆಚ್ಚು ದ್ರವ್ಯರಾಶಿ ಹೊಂದಿದ ಗ್ಯಾಲಕ್ಸಿಯ ಸುತ್ತವೇ ಬೇಕಾದರೂ ತಿರುಗುತ್ತಿರಬಹುದು. ಅದರಾಚೆ ಅವೆಲ್ಲವೂ ನೂರೆಂಟು ಕೇಂದ್ರಗಳಿಂದ ಅವುಗಳಲ್ಲಿ ಒಂದು ಪುಂಜವನ್ನು ಕೇಂದ್ರವಾಗಿರಿಸಿಕೊಂಡ ಮತ್ತೊಂದು ದೊಡ್ಡ ಕೇಂದ್ರದ ಸುತ್ತ ತಿರುಗುತ್ತಿರಬಹುದು. ಹೀಗಾಗಿ ಅನಂತ ಕೋಟಿ ಸೂರ್ಯರು. Law of conservation of energy ಪ್ರಕಾರವೇ ಆ ಸೂರ್ಯರೂ ಬೆಳಗುವುದು. ಚೈತನ್ಯ ಇನ್ನೆಲ್ಲೋ ಮತ್ತಾವುದೋ ರೂಪದಲ್ಲೋ ಹಾಗೆ ಸೂರ್ಯ ನಕ್ಷತ್ರಗಳಂತೆ ಬೆಳಗುವುದಕ್ಕೂ ಮುನ್ನವೇ ಇದೆ. ಅದಕ್ಕೆ ಆದಿ ಅಂತ್ಯಗಳಿರದು. ಅನ್ವೇಷಣೆಗೆ ತೊಡಗಿದರೆ ದೊಡ್ಡ ದೊಡ್ಡ ತಿರುಗುವಿಕೆ ಕಾಣುತ್ತಾ ಹೋಗುತ್ತದೆ. ಅದಕ್ಕೆ ಒಂದು ಮಿತಿಯೇ ಇಲ್ಲ. ಹತ್ತಿರ ಮತ್ತು ದೂರ ಇವೆಲ್ಲವೂ ಸಾಪೇಕ್ಷ ಸಿದ್ಧಾಂತದ ಪ್ರಕಾರ ಇದೆ ಅಷ್ಟೇ. ಸಣ್ಣದು ದೊಡ್ಡದನ್ನು ಆಧರಿಸಿರುತ್ತದೆ. ಮತ್ತೆ ಇಲ್ಲಿ ಸಣ್ಣದು - ದೊಡ್ಡದು ಎಂಬುದು ಕೂಡಾ ಸಾಪೇಕ್ಷ ಅನುಭವ. ಅಷ್ಟು ವಿಚಿತ್ರ ಈ ಬದುಕು. ಇಲ್ಲಿ ಸಣ್ಣದು ಎಂಬುದು ಸಣ್ಣದೇನಲ್ಲವಾದ್ದರಿಂದ ಸಣ್ಣದರಲ್ಲಿ ದೊಡ್ಡದೂ ಇದೆ. ಕೇಂದ್ರ ಯಾವುದು ಎಂದರೆ ನಾವು ಯಾವುದನ್ನು ಕೇಂದ್ರ ಮಾಡುತ್ತೇವೋ ಅದು ಕೇಂದ್ರವಾಗಿಬಿಡುತ್ತದೆ. ಮತ್ತೆ ಅದರಾಚೆಗಿನ ಇನ್ನೊಂದು ಕೇಂದ್ರದಿಂದ ಅದು ಆಧರಿಸಲ್ಪಟ್ಟಿರುತ್ತದೆ. ಹೀಗೆ ಅದೂ ಅನಂತ. ಅದೇ ನಮ್ಮ ವಿಶ್ವರೂಪ. ದೇಹಕ್ಕೆ ಒಂದು ನಿರ್ದಿಷ್ಟ ಆಕಾರವಿದ್ದರೂ ಅದರ ಹಿಂದಿನ ಚೇತನ ಅನಂತ. ಈ ಅದೃಶ್ಯ ಶರೀರದಲ್ಲಿ ಸರ್ವಸ್ವವೂ ಇರುತ್ತದೆ.
ಭೂಮಿಗೆ ಸಂಬಂಧಿಸಿ ಹತ್ತಿರದ ಕೇಂದ್ರ ಸೂರ್ಯ ಎಷ್ಟು ದೂರದಲ್ಲಿ ಇದ್ದಾನೆ ಎಂದರೆ ನಾವು ಅಲ್ಲಿಂದ ಹುಟ್ಟಿ ಇಷ್ಟು ರೂಪಾಂತರವನ್ನು ಪಡೆಯುತ್ತಾ ಬೇಕಾದ ಗಾಳಿ, ಬೆಳಕು, ನೀರು, ಮಣ್ಣು, ಆಕಾಶತತ್ತ್ವದಿಂದ ಎಷ್ಟೋ ಜ್ಯೋತಿರ್ವರ್ಷಗಳ ಅಂತರದಿಂದ ಪಡೆದ ಚೈತನ್ಯ ಹಾಗೂ ಪ್ರತಿಕ್ಷಣ ಅಲ್ಲಿ ಬಿಡುಗಡೆಯಾಗುವ ಚೈತನ್ಯ ನಮ್ಮ ಆತ್ಮದಿಂದ ಬಿಡುಗಡೆಯಾಗುವ ಚೈತನ್ಯವೇ ಎಂಬಂತೆ ವಿಧವಿಧವಾದ ಪರಿವರ್ತನೆಗಳೊಂದಿಗೆ ಬೇಕಾದಷ್ಟು ದೂರದಲ್ಲಿ ಬೇಕಾದಂತೆ ಇರುತ್ತಾ, ರೂಪಾಂತರಗಳನ್ನು ತಾಳಿ, ಇಂದ್ರಿಯ, ಬುದ್ಧಿ, ಮನಸ್ಸುಗಳ ಬಯಕೆಯಂತೆ ಏನೋ ತನ್ನಿಷ್ಟವನ್ನೇ ಅನುಭವಿಸುತ್ತಿರುವ ಸೂರ್ಯನ ತೇಜದ ಪರಿವರ್ತನೆ ನಾವು. ನೇರವಾಗಿ ನೋಡಿದರೂ ಆ ಬೆಳಕಿನ ಕಣಗಳು ಎಷ್ಟೋ ದೂರದಿಂದ ನಿರಂತರವಾಗಿ ಎಂಬಂತೆ ಬರುತ್ತಿವೆಯಾದ್ದರಿಂದ ಕಾಲಾಂತರ ಮತ್ತು ರೂಪಾಂತರ ಇದ್ದೇ ಇದೆ. ಆದರೆ ನಿರಂತರ ಸಂಪರ್ಕ ಇದೆ. ಆ ಸೂರ್ಯನಾದರೂ ಎಷ್ಟು ದೂರದಲ್ಲಿ ಇದ್ದಾನೆ ಎಂದರೆ ಅದು ಎಷ್ಟು ಬೇಕೋ ಅಷ್ಟೇ ದೂರದಲ್ಲಿ ಇದ್ದಾನೆ. ಒಂದು ಅಭಿಪ್ರಾಯದಂತೆ ಚಂದ್ರನ ವ್ಯಾಸದ 108 ಪಾಲು ದೂರದಲ್ಲಿ ಭೂಮಿ ಇದೆ. ಸೂರ್ಯನ ವ್ಯಾಸದ 108 ಪಾಲು ದೂರದಲ್ಲಿ ಈ ಭೂಮಿ ಇದೆಯಂತೆ. ವಿಜ್ಞಾನಿಗಳು ಇನ್ನೂ ನಿಖರವಾಗಿ  ಜ್ಯೋತಿರ್ವರ್ಷಗಳಲ್ಲಿ ಇದನ್ನು ಲೆಕ್ಕಹಾಕಿ ಹೇಳಿದ್ದಾರೆ. ನಿಜ ಹೇಳಬೇಕೆಂದರೆ ಈ ಚೈತನ್ಯದ ವೇಗವನ್ನು ಜ್ಯೋತಿರ್ವರ್ಷಗಳಲ್ಲಿ ಮಾತ್ರ ಹೇಳಬೇಕು. ಆ ಚೈತನ್ಯಕ್ಕೆ ಆದಿ ಅಂತ್ಯವೇ ಇಲ್ಲ. ಅನುಭವಕ್ಕೆ ಆದಿಯಿರಬಹುದಷ್ಟೇ. ಅದರಾಚೆಗೂ ಅಸಾಧ್ಯವಾದ ಪ್ರಮಾಣಗಳಲ್ಲಿ ಆ ಚೈತನ್ಯ ಚೈತನ್ಯದಿಂದಲೇ ಕೂಡಿರುವ ನಮ್ಮ ಅನಂತ ಬಾಹುಳ್ಯಕ್ಕೆ ಅನುಭವವಾಗಬಹುದು. ಏಕೆಂದರೆ ಆ ಅನುಭವಕ್ಕೆ ಕೇಂದ್ರ ನಾನೇ. ಇಲ್ಲಿ ಕೃಪೆ ಮತ್ತು ಅನುಗ್ರಹವನ್ನು ಈ ಜೀವವ್ಯವಸ್ಥೆಯ ಅನುಭವ-ಅನುಭಾವಕ್ಕಾಗಿ ನೀಡಿದಂತೆ ಇದೆಯೇ ಹೊರತು ಇನ್ನಾವುದಕ್ಕೂ ಅಲ್ಲ ಅನ್ನಿಸುತ್ತದೆ. ಊಹಿಸುತ್ತಾ ಹೋಗುವ ನನ್ನ ಅನುಭವವೇ, ಊಹೆಯೇ ನಾನು ಎನ್ನುವಂತೆ, ಆ ನನಗಾಗಿಯೇ ಈ ಎಲ್ಲವೂ ಇದೆ ಮತ್ತು ಎಲ್ಲವೂ ನಾನು ಎಂಬುದು ಎಲ್ಲಾ ಪ್ರಮಾಣಗಳಿಂದ ಸಾಬೀತಾಗುವ ಸತ್ಯ. ಆ ನಾನು ಎಂಬುದು ಅನಂತ ಏಕೆಂದರೆ ಅದರಲ್ಲಿ ಪ್ರತ್ಯೇಕ ಎಂಬುದಿಲ್ಲದ ಅನಂತ ವಿಸ್ತಾರವಿರುತ್ತದೆ. ನನ್ನ ಜೊತೆಗೆ ನಾನು ಹೇಗಿರಬೇಕೋ ಹಾಗೆ ನಾನು ಎಲ್ಲ ವ್ಯಕ್ತಿ - ವಸ್ತು - ಚೇತನಾವಸ್ಥೆಗಳ ಜೊತೆಗೆ ವರ್ತಿಸಬೇಕು. ಏಕೆಂದರೆ ನನ್ನ ಹೊರತಾಗಿರುವ ಸರ್ವಸ್ವವೂ ಕೂಡಾ ನಾನೇ ಎಂಬ ಎಚ್ಚರಿಕೆ ನನಗೆ ಸದಾ ಇರಬೇಕು! ಅಲ್ಲಿ ಎಲ್ಲ ಸ್ವಾರ್ಥ ನಿಸ್ವಾರ್ಥದ ಕೊಡು ಕೊಳ್ಳುವಿಕೆಗಳಿಂದ ನಿತ್ಯ ನಿರಂತರವಾಗಿ ನಡೆಯುವ ಅನಂತ ಸ್ವಾರ್ಥ! ಅನಂತದಲ್ಲಿ, ಅನಂತಕ್ಕೆ ಸ್ವಾರ್ಥವೇಕೆ ಎಂದರೆ ಅದು ನಿಸ್ವಾರ್ಥ! ತ್ಯಾಗ ಭೋಗಗಳಲ್ಲಿ ಭೋಜ್ಯವೂ ಭೋಗಿಸುವುದೂ ಆ ಅನಂತ ಚೈತನ್ಯ ಸ್ವರೂಪವಾದ ಪರಮಾತ್ಮನೇ.
ಈಗ ಹೇಳಿ, ಈ ವಿವಿಧ ಗ್ಯಾಲಕ್ಸಿಗಳಲ್ಲಿ ಯಾವುದೋ ಚಲನೆ ಏರುಪೇರಾಗಿ ಯಾವುದೋ ಕ್ಷುದ್ರ ಗ್ರಹ ಈಚೆ ಬಂದು ಬಡಿಯಲಿಲ್ಲವೇಕೆ? ಸೂರ್ಯ ಮತ್ತು ಚಂದ್ರರು ಇಲ್ಲಿಂದ ಇರುವ ಅಳತೆ ಹೆಚ್ಚು ಕಡಿಮೆಯಾಗಿ ಒಂದೋ ಭೂಮಿ ಸುಡಲಿಲ್ಲವೇಕೆ ಅಥವಾ ನೀರಲ್ಲಿ ಮುಳುಗಲಿಲ್ಲವೇಕೆ? ಎಲ್ಲವೂ ಇಲ್ಲಿ ನನಗೆ ಹೇಳಿ ಮಾಡಿಸಿದಂತಿದೆ ಅಲ್ಲವಾ? ಹತ್ತಿರ ಇರುವ ಆಕಾಶಕಾಯಗಳೇ ಹೀಗೆ ಅನುಗ್ರಹಿಸುತ್ತಿರುವಾಗ ಇನ್ನೂ ಅದರಾಚೆಯ ಯಾವ ನಕ್ಷತ್ರ ಕೂಡ ಉರಿದದ್ದು ಹೆಚ್ಚಾಗಿ ಸಿಡಿದು ಚಲಿಸುತ್ತಿಲ್ಲ, ಯಾವ ಅತಿಕ್ರಮಣ, ಅತಿರೇಕವೂ ಇಲ್ಲ. ಅದೊಂದು ಪವಾಡ ಅಲ್ಲವೇ? ಏಕೆಂದರೆ ಈ ಇಂದ್ರಜಾಲ ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ಒಂದು ಸಣ್ಣ ಕೆಲಸವನ್ನು ನಾವು ಪರ್ಫೆಕ್ಟ್ ಮಾಡಿ ತೋರಿಸಬಹುದು. ಅದೂ ಕೆಲವೊಮ್ಮೆ ನಮಗೆ ಸಾಹಸ. ಅಂಥದ್ದರಲ್ಲಿ ಈ ಚೌಕಟ್ಟೇ ಇಲ್ಲದ ಪರಮಾತ್ಮ ಅಥವಾ ಎನರ್ಜಿ ಅದರಿಂದ ರೂಪ ಪಡೆದ ನನ್ನ ಅನುಭವಕ್ಕಾಗಿ ನನಗೆ ಬೇಕಾದಂತೆಯೇ ಇರಬಲ್ಲುದಷ್ಟೇ, ಏಕೆಂದರೆ ಅದು ನನ್ನ ಸೃಷ್ಟಿ - ಹೌದಾ, ಇದು ನಿಜವಾ? ಹುಲಿ ಆಕಾಶಕ್ಕೆ ಜಿಗಿದಂತೆ ಕಾಣುವ ಕನಸಿನ ಆಶ್ಚರ್ಯಕ್ಕಿಂತ ನಾನು ಇಲ್ಲಿ ಬದುಕುತ್ತಿರುವ ಪಡೆಯುತ್ತಿರುವ ಅನುಭವದ ಹಿಂದೆ ಅಗಾಧವಾದ ಸಾಹಸ, ಸಿದ್ಧಿ, ಪರಮಾತ್ಮನ ಅಂದರೆ ನನ್ನದೇ ಅನಂತಾನಂತ ಅನುಗ್ರಹ ಇಲ್ಲಿ ಇರುವುದೂ ಕನಸಿನಷ್ಟೇ ಸತ್ಯ. ಹಾಗೆಯೇ ಅದೊಂದು ಗುರುತ್ವದಂತೆ, ಪ್ರೀತಿಯಂತೆ ಸ್ವಲ್ಪವೂ ಹೆಚ್ಚು ಕಮ್ಮಿ ಇಲ್ಲದೆ ಎಲ್ಲ ವಸ್ತು, ವಿಷಯ, ಆಲೋಚನೆ, ಜೀವಿಗಳು, ವ್ಯಕ್ತಿ, ಆಕಾಶಕಾಯಗಳನ್ನೂ ನನ್ನ ಅನುಭವಕ್ಕಾಗಿಯೇ ಲೆಕ್ಕಾಚಾರ ಮಾಡಿ ಅಷ್ಟೇ ದೂರ, ಇಷ್ಟೇ ಹತ್ತಿರ ಎನ್ನುವಂತೆ ಇಟ್ಟು ಬದುಕಿಸುತ್ತಿದೆ ಎಂಬುದು ಅದ್ಭುತವಾದ ಕನಸು! ನಿಜ ತಾನೇ? ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ, ಅಯಮಾತ್ಮಾ ಬ್ರಹ್ಮ!

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್