ಹಣಕಾಸು ನಿರ್ವಹಣೆ ಹೇಗಿರಬೇಕು?

ಸಾಮಾನ್ಯ ಜನರಿಗೆ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ಈ ಲೇಖನದಲ್ಲಿ ನಾನು ಹಣಕಾಸು ನಿರ್ವಹಣೆ ಮತ್ತು ಹೂಡಿಕೆ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಅನುಭವಗಳ ಆಧಾರದಲ್ಲಿ ಪ್ರೀತಿಯಿಂದ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಲೇಖನ ತಮಗೆ ಇಷ್ಟವಾದರೆ ಒಂದು ಲೈಕ್, ಕಮೆಂಟ್ ಅಥವಾ ಮೆಸೇಜ್ ಬಾಕ್ಸಿನಲ್ಲಿ ಮೆಚ್ಚುಗೆಯನ್ನು ತಿಳಿಸಿ.
ಹಣದುಬ್ಬರ ಎಂಬ ಪದವನ್ನು ನೀವು ಕೇಳಿರಬಹುದು. ಏನಿದು ಹಣದುಬ್ಬರ? ನಮ್ಮ ಕರೆನ್ಸಿ ಪ್ರತಿವರ್ಷ ಅಪಮೌಲ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಹಣದುಬ್ಬರದಿಂದಾಗಿ ಅದರ ಕೊಳ್ಳುವ ಸಾಮರ್ಥ್ಯ(Purchasing power) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಪ್ರಸ್ತುತ ಭಾರತದಲ್ಲಿ ಈ ಹಣದುಬ್ಬರದ ದರ 6-7% ಸುಮಾರಿಗೆ ಇದೆ. ಅಂದರೆ, ವರ್ಷದಿಂದ ವರ್ಷಕ್ಕೆ ಹಣದ ಮೌಲ್ಯ ಅಷ್ಟು ಕುಸಿದಿರುತ್ತದೆ ಎಂದರ್ಥ. ಹಾಗಾಗಿ, ನಮ್ಮಲ್ಲಿರುವ ಹಣವು ಈ ಹಣದುಬ್ಬರವನ್ನು ಮೀರಿ ಬೆಳೆಯಬೇಕು. ಹಾಗಿದ್ದರೆ ಮಾತ್ರ ಅದು ಹೂಡಿಕೆಯಾಗುತ್ತದೆ.
ಷೇರು ಮಾರುಕಟ್ಟೆಯು ನಿಮ್ಮ ಹಣ ಉತ್ಕೃಷ್ಟ ರೀತಿಯಲ್ಲಿ ಬೆಳೆಯಲು ನೀವು ನೀಡಬಹುದಾದ ಅವಕಾಶವಾಗಿದೆ. ಷೇರುಗಳ ಮೂಲಕ ಅಥವಾ ಇಂಡೆಕ್ಸ್ ಫಂಡ್‌ಗಳ ಮೂಲಕ ದೀರ್ಘ ಅವಧಿಗೆ ನಿಮ್ಮ ಉಳಿತಾಯದ ಒಂದು ಭಾಗವನ್ನು ಹೂಡಿಕೆ ಮಾಡಲು ಪ್ರಯತ್ನಿಸಬಹುದು. ಇದಕ್ಕಾಗಿ ವಿವಿಧ ಎಸೆಟ್ ಮೇನೇಜ್‌ಮೆಂಟ್ ಕಂಪೆನಿಗಳು ನಿರ್ವಹಿಸುವ ವಿಶೇಷ ಇಂಡೆಕ್ಸ್ ಫಂಡ್‌ಗಳನ್ನು ಹುಡುಕಿ ಆರಿಸಿಕೊಳ್ಳಬೇಕು. ಆದರೆ, ನೆನಪಿಡಿ. ಶೇರು ಮಾರುಕಟ್ಟೆಯಲ್ಲಿ ಹಣದ ಮೌಲ್ಯವು ಗುಳ್ಳೆಯಂತೆ. ಮಾರುಕಟ್ಟೆ ಕುಸಿತ ಅಥವಾ ಹಿಂಜರಿತಕ್ಕೆ ಒಳಗಾದಾಗ ನೀವು ಒಂದು ವರ್ಷದಿಂದ 3 ವರ್ಷಗಳ ತನಕ ಚೇತರಿಕೆಗೆ ಕಾಯಬೇಕಾಗಬಹುದು. 1929ರಲ್ಲಿ ಉಂಟಾದ ಯುಎಸ್ಎ ಆರ್ಥಿಕ ಮಹಾಕುಸಿತದ ಪರಿಣಾಮ ಕುಸಿದ ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಇಂಡೆಕ್ಸ್ ಚೇತರಿಸಿಕೊಳ್ಳಲು 1954ರ ತನಕ ಕಾಯಬೇಕಾಯಿತಂತೆ ಎಂಬುದು ಇತಿಹಾಸ. ಆದಾಗ್ಯೂ, ಆಧುನಿಕ ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಖ್ಯೆ ಮತ್ತು ಹೂಡಿಕೆಯ ಮೌಲ್ಯ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಭಯಪಡುವ ಅವಶ್ಯಕತೆ ಇಲ್ಲ.
ಮ್ಯೂಚುವಲ್ ಫಂಡ್‌ಗಳಲ್ಲಿ ಹಲವಾರು ವಿಭಾಗಗಳಿವೆ. ನೂರಾರು ಮ್ಯೂಚುವಲ್ ಫಂಡ್‌ಗಳೂ ಇವೆ. ಏಕ್ಟಿವ್ ಫಂಡ್‌ಗಳು ಒಮ್ಮೊಮ್ಮೆ ಒಂದೊಂದು ರೀತಿ ಫಲಿತಾಂಶ ನೀಡುವ ಸಾಧ್ಯತೆ ಹೆಚ್ಚು. ಪ್ಯಾಸಿವ್ ಫಂಡ್‌ಗಳು ಒಂದು ನಿಗದಿತ ಇಂಡೆಕ್ಸ್ ಧಾರಣೆಯನ್ನು ಅನುಸರಿಸುವುದರಿಂದ ಉತ್ತಮವಾಗಿವೆ. ಇಂಡೆಕ್ಸ್‌ಗಳು ಸ್ಟಾಕ್ ಎಕ್ಸ್‌ಚೇಂಜ್‌ಗಳಿಂದ ಕಾಲಕಾಲಕ್ಕೆ ರಿಬ್ಯಾಲೆನ್ಸಿಂಗ್‌ಗೆ ಒಳಪಡುವುದರಿಂದ ಇಂಡೆಕ್ಸ್‌ ಫಂಡ್‌ಗಳು ಯೋಗ್ಯವಾಗಿವೆ. ಇನ್ನು, ಷೇರುಗಳಂತೆ ಒಳ್ಳೆಯ ಮೌಲ್ಯ ಪಡೆಯಲು ಆಸ್ತಿಯ ಮೇಲೆ ಹೂಡಿಕೆ ಮಾಡುವವರೂ ಇದ್ದಾರೆ.
ಷೇರು ಮಾರುಕಟ್ಟೆ ಹಿಂಜರಿತದಿಂದ ನೀವು ಪಾರಾಗಲು ನಿಮ್ಮ ಹೂಡಿಕೆಯನ್ನು ಕಮಾಡಿಟಿ ಜೊತೆ ಹೆಡ್ಜ್ ಮಾಡಲು ಕಲಿಯಿರಿ. ನನ್ನ ಸಲಹೆ, ನೀವು ಚಿನ್ನದ ಇಟಿಎಫ್‌ಗಳಲ್ಲಿ ಅಥವಾ ಗೋಲ್ಡ್ ಫಂಡ್ ಅಥವಾ ಚಿನ್ನದ ಬಾರ್‌ಗಳಲ್ಲಿ ಒಂದಷ್ಟು ಹಣವನ್ನು ತೊಡಗಿಸುವುದು ಹೆಚ್ಚು ಸೂಕ್ತ. ಶೇರು ಮಾರುಕಟ್ಟೆ ಕುಸಿಯುವಾಗ ಚಿನ್ನದ ದರ ಏರುತ್ತದೆ. ಹಾಗೆಯೇ, ಶೇರು ಮಾರುಕಟ್ಟೆ ಏರುಗತಿಯಲ್ಲಿದ್ದಾಗ ಚಿನ್ನ, ಬೆಳ್ಳಿ, ಧಾನ್ಯ, ದ್ರವ್ಯಗಳ ಮೌಲ್ಯ ಇಳಿಮುಖವಾಗುತ್ತಿರುತ್ತದೆ.
ಇನ್ನು, ನೀವು ತೊಡಗಿಸಲೇ ಬೇಕಾದ ಮುಖ್ಯವಾದ ಹೂಡಿಕೆ ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್‌ಗಳು. ಇವುಗಳ ಬಡ್ಡಿದರ ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪತ್ರದ ಬಡ್ಡಿಗಿಂತ ಶೇ. 0.35ರಷ್ಟು ಅಧಿಕವಾಗಿದೆ. ನೇರವಾಗಿ ಆರ್‌ಬಿಐ ಹೊರಡಿಸುವ ಬಾಂಡ್ ಆಗಿರುವುದರಿಂದ ಬಡ್ಡಿದರ ಆಗಾಗ ಬದಲಾಗುವುದಿದ್ದರೂ ಕೂಡಾ ಸುದೀರ್ಘ ಅವಧಿಗೆ ಬಂಡವಾಳ ಸುರಕ್ಷಿತವಾಗಿದೆ. ಏಳು ವರ್ಷಗಳ ಲಾಕ್ ಇನ್ ಅವಧಿ ಇರುವುದಾದರೂ ಕೂಡಾ ಎಷ್ಟೇ ಮೊತ್ತವನ್ನಾದರೂ ಇದರಲ್ಲಿ ಹೂಡಿಕೆ ಮಾಡಬಹುದು. ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಸುರಕ್ಷಿತ ಹೂಡಿಕೆ ಇದಾಗಿದೆ.
ಒಬ್ಬರು ತಮ್ಮ 6ರಿಂದ 12 ತಿಂಗಳ ಅವಶ್ಯಕತೆಗೆ ಬೇಕಾಗುವ ಹಣವನ್ನು ತುರ್ತು ನಿಧಿ ಅಥವಾ ಆಪದ್ಧನವಾಗಿಯೂ ಇಟ್ಟುಕೊಂಡಿರಬೇಕಾಗುತ್ತದೆ. ಇದನ್ನು ಗೋಲ್ಡ್ ಇಟಿಎಫ್, ಲಿಕ್ವಿಡ್ ಫಂಡ್, ಎಫ್‌ಡಿ, ಸೇವಿಂಗ್ಸ್ ಎಕೌಂಟ್ ಇವೆಲ್ಲವುಗಳ ಮೂಲಕ ಇರಿಸಿಕೊಳ್ಳಬಹುದು. ಇಲ್ಲಿ ಎಫ್‌ಡಿ, ಸೇವಿಂಗ್ಸ್ ಅಕೌಂಟ್‌ಗಳ ಮೂಲಕ ಕೊಂಚ ಹಣವನ್ನು ರಕ್ಷಣೆ ಮಾಡಬಹುದು ಅಷ್ಟೇ. ಆರ್‌ಬಿಐ ನಿಯಮದ ಪ್ರಕಾರ ಯಾವುದೇ ಬ್ಯಾಂಕಿನಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಮೊತ್ತಕ್ಕೆ ಭದ್ರತೆ ಇರುವುದಿಲ್ಲ. ಹಾಗಾಗಿ ಎಫ್‌ಡಿಗಳಿಗಿಂತ ಹೆಚ್ಚು ಲಿಕ್ವಿಡಿಟಿ, ಸುರಕ್ಷತೆ ಮತ್ತು ಬೆಳವಣಿಗೆ ಹೊಂದಿರಬಹುದಾದ ಲಿಕ್ವಿಡ್ ಫಂಡ್‌ಗಳು, ಮನಿ ಮಾರ್ಕೆಟ್ ಫಂಡ್‌ಗಳು, ಕಾರ್ಪೊರೇಟ್ ಬಾಂಡ್ ಫಂಡ್‌ಗಳು ಒಳ್ಳೆಯ ಆಯ್ಕೆಯೆನಿಸುತ್ತವೆ.
ಮ್ಯೂಚುವಲ್ ಫಂಡ್‌ಗಳನ್ನು ನಿರ್ವಹಿಸುವ ಕಂಪೆನಿಗಳನ್ನು ಎಎಮ್‌ಸಿಗಳು ಎನ್ನುತ್ತಾರೆ. ಇನ್ಶುರೆನ್ಸ್ ಪಾಲಿಸಿಗಳನ್ನು ವಿತರಿಸುವ ಕಂಪೆನಿಗಳನ್ನು ಇನ್ಶುರೆನ್ಸ್ ಕಂಪೆನಿಗಳು ಎನ್ನುವರು. ಇತ್ತೀಚೆಗೆ ಕೆಲವು ಖಾಸಗಿ ಇನ್ಶುರೆನ್ಸ್ ಕಂಪೆನಿಗಳು ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ರಾಡಕ್ಟ್‌ಗಳನ್ನು ವಿತರಿಸುತ್ತಿದ್ದು ಇವುಗಳಲ್ಲಿ ಇನ್ಶುರೆನ್ಸ್ ಕವರ್ ಮೊತ್ತ ಮತ್ತು ಅವಧಿಯೂ ಕಡಿಮೆ, ಅಲ್ಲದೆ, ಲಾಕ್ ಇನ್ ಅವಧಿ ಇರುವ ಕಾರಣ ಆಚೆಗೆ ಮ್ಯೂಚುವಲ್ ಫಂಡ್‌ಗಳಿಗೂ ಇವು ಸರಿಸಾಟಿಯಾಗಿಲ್ಲ ಎಂಬ ಆರೋಪವಿದೆ.
ಸರಿಯಾದ ಹೂಡಿಕೆ ತಜ್ಞರು ಇಂಟ್ರಾಡೇ ಟ್ರೇಡಿಂಗ್, ಫ್ಯೂಚರ್ ಎಂಡ್ ಆಪ್ಶನ್ ಟ್ರೇಡಿಂಗ್ ಇವ್ಯಾವುದನ್ನೂ ಸಲಹೆ ಮಾಡುವುದಿಲ್ಲ. ಸಂಪಾದನೆಗೆ ಮತ್ತು ಯಶಸ್ಸಿಗೆ ಸಾಕಷ್ಟು ತಾಳ್ಮೆ ಮುಖ್ಯವಾಗಿದೆ. ಹಾಗಾಗಿ, ದೀರ್ಘಾವಧಿಯ ಹೂಡಿಕೆಗಳನ್ನು ಮಾತ್ರ ಶಿಫಾರಸು ಮಾಡಲಾಗುತ್ತದೆ. ಬಹುತೇಕ ಜನರು ಇನ್ಶುರೆನ್ಸನ್ನು ಹೂಡಿಕೆ ಎಂದು ಭಾವಿಸಿರುತ್ತಾರೆ. ಆದರೆ ಇನ್ಶುರೆನ್ಸ್ ಒಂದು ಹೂಡಿಕೆಯಾಗುವುದಿಲ್ಲ. ಇನ್ಶುರೆನ್ಸ್ ಎಂದಾಗ ಮುಖ್ಯವಾದುದು 'ಟರ್ಮ್ ಇನ್ಶುರೆನ್ಸ್' ಮತ್ತು 'ಹೆಲ್ತ್ ಇನ್ಶುರೆನ್ಸ್'. ಇವೇನೋ ಹೆಚ್ಚಿನ ರಿಸ್ಕ್ ಕವರ್ ಮತ್ತು ಆರೋಗ್ಯ ಭದ್ರತೆ ಒದಗಿಸುತ್ತವೆ. ಆದರೆ, ಇನ್ಶುರೆನ್ಸ್ ಕಂಪೆನಿ ಏಜೆಂಟರು ವಿತರಿಸುವ ಅಧಿಕ ಪ್ರೀಮಿಯಂ ಹೊಂದಿರುವ ಆಕರ್ಷಕ ಪಾಲಿಸಿಗಳಲ್ಲಿ  ಅತ್ತ ಹೂಡಿಕೆಯ ಅದ್ಭುತ ಲಾಭವೂ ಇರುವುದಿಲ್ಲ, ಇತ್ತ ರಿಸ್ಕ್ ಕವರ್ ಮೊತ್ತವೂ ಕಡಿಮೆ.

✍️ ಶಿವಕುಮಾರ್ ಸಾಯ 'ಅಭಿಜಿತ್'
Disclaimer: This is my personal opinion and is only for educational purposes. Please consult your financial advisor before making any decision.

Comments

Post a Comment

Popular posts from this blog

ಬಹಿರಂತಶ್ಚ ಭೂತಾನಾಂ........

ಸುಪ್ತ ಮನಸ್ಸಿನ ಅಪರಿಮಿತ ಶಕ್ತಿ