ಬಹಿರಂತಶ್ಚ ಭೂತಾನಾಂ........

ಬಹಿರಂತಶ್ಚ ಭೂತನಾಮಚರಂ ಚರಮೇವ ಚ |
ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ ||
ಭಗವದ್ಗೀತೆಯ ಕೆಲವು ಸಾಲುಗಳಿವು.
ಈ ಶ್ಲೋಕದ ಅರ್ಥ ದೇವರು ಎಂದರೆ ಯಾರು? ಅವನು ಎಲ್ಲಿದ್ದಾನೆ? ಎಂಬ ನಮ್ಮ ಹುಡುಕಾಟಕ್ಕೆ ಉತ್ತರ. "ಅದು ಜೀವಿಗಳ ಹೊರಗಿದೆಒಳಗೂ ಇದೆಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣುಅದಕೆಂದೆ ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ." ಇದು ಸಾರ.
ಈಶೋಪನಿಷದ್ ಮಂತ್ರದಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ ರೀತಿಯಲ್ಲಿಯೇ ಪ್ರಾಯೋಗಿಕವಾಗಿ ದೇವರನ್ನು ವಿವರಿಸುವ ವೈದಿಕ ಮಂತ್ರವಿದೆ: "ತದ್ ಅಂತರ ಅಸ್ಯ ಸರ್ವಸ್ಯ ತದ್ ಸರ್ವಸ್ಯ ಬಾಹ್ಯಃ" - ಅಂದರೆ, "ಅವನು ಎಲ್ಲದರೊಳಗೆ ಅಸ್ತಿತ್ವದಲ್ಲಿದ್ದಾನೆ, ಆದರೆ ಅವನು ಎಲ್ಲದರ ಹೊರಗಿದ್ದಾನೆ." ನಾವು ಭಗವಂತನಂತೆ ಆಗುವುದಕ್ಕೆ ಸಾಧ್ಯವಾ? ಕೀಳರಿಮೆ ಮತ್ತು ಮೇಲರಿಮೆ ಎರಡರಿಂದಲೂ ಅದು ಸಾಧ್ಯವಿಲ್ಲ. ಆದರೆ, ಸಾಧ್ಯವಿದೆ - ನಮ್ಮ ಶಕ್ತಿಯನ್ನು ನಮ್ಮ ಒಳಹೊರಗು ಇರುವ ಸರ್ವ ಭೂತಗಳಲ್ಲೂ ಕಂಡುಕೊಳ್ಳುವ ಮೂಲಕ ಮಾತ್ರ. ಆ ಶಕ್ತಿ ಸರ್ವಾಂತರ್ಯಾಮಿ. ಅಂದರೆ, ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ. ನೀವು - ನಾವು ನಮ್ಮ ನಮ್ಮ ಆಳಕ್ಕಿಳಿದು ಪ್ರಶ್ನಿಸಿಕೊಳ್ಳಬೇಕು. ನಮ್ಮ ಊಹೆಗೆ ನಿಲುಕದ, ನಾವು ಕಾಣದ ಹಲವಾರು ವಿಚಾರಗಳು ನಮ್ಮೆಲ್ಲರನ್ನೂ ಬದುಕಿಸುತ್ತಲೇ ಇರುತ್ತವೆ. ಅದರಲ್ಲಿ ಎಲ್ಲರೂ ಇದ್ದಾರೆ! ಅಂದರೆ, ನಿಮಗೆ ನಮಗೆ ಮಾತ್ರ ತಿಳಿದಿರುವ ರಹಸ್ಯಗಳು ಎಂಬುದು ಲೋಕದಲ್ಲಿ ಇಲ್ಲವೇ ಇಲ್ಲ! ಆದರೆ, ನೀವು ನಾವು ಹಾಗೆ ಭಾವಿಸಿದರೆ ಅದು ಸುಳ್ಳು ಎಂಬ ಎಚ್ಚರಿಕೆ ಇರಬೇಕಾಗುತ್ತದೆ. ಅದರ ಬದಲು, ಕೀಳರಿಮೆ ಮತ್ತು ಮೇಲರಿಮೆ ಪಡದಿರುವುದು - ಅಂದರೆ, ಅಸ್ತಿತ್ವವು ಸಮಗ್ರತೆಯಲ್ಲಿದೆ ಎಂಬ ಪೂರ್ಣದ ಅರಿವಿನೊಂದಿಗೆ ಆನಂದದಲ್ಲಿರುವುದು ಮುಖ್ಯವಾಗುತ್ತದೆ. 360 ಡಿಗ್ರಿ‌ಗಳಿಂದ ಜಗತ್ತನ್ನು ನೋಡಲಿಕ್ಕಾದರೆ ಮಾತ್ರ 'ನಾನು' ಎಂಬ ಮೇಲರಿಮೆಗಾಗಲೀ, 'ನಾನೇನೂ ಅಲ್ಲ' ಎಂಬ ಕೀಳರಿಮೆಗಾಗಲೀ ಎರಡಕ್ಕೂ ಅಸ್ತಿತ್ವ ಇಲ್ಲ ಎಂಬುದು ಗೊತ್ತಾಗುತ್ತದೆ. 'ನಾವು' ಎಂಬ ಅನಂತ ಸರಮಾಲೆಯಲ್ಲಿ ಅನೇಕ ದೃಶ್ಯದಂತೆ ಕಾಣುವ ಮತ್ತು ಅದೃಶ್ಯವಾಗಿಯೇ ಇರುವ ಬಿಂದುಗಳೂ ಇವೆ. ಅವೆಲ್ಲವೂ ಮುಖ್ಯವೇ. ಅನೇಕ ದೃಶ್ಯಾದೃಶ್ಯ ಬಿಂದುಗಳ ಸರಮಾಲೆಯಾಗಿರುವ ಅನಂತ ಚೈತನ್ಯಕ್ಕೆ ನಮೋನ್ನಮಃ! ಏಕೆಂದರೆ, ರಕ್ಷಿಸುತ್ತಿರುವುದು ಅದೇ! ಸರ್ವಸ್ವದಿಂದ ರಕ್ಷಿಸಲ್ಪಡುತ್ತಿದ್ದೇವೆ! ಎಲ್ಲವೂ ಸೇರಿ ನಾವು! ಅದು ತನ್ನನ್ನೂ ಒಳಗೊಂಡಂತೆ ಯಾರನ್ನೇ ಆಗಲಿ ಬಿಡದೆ, ಒಂದೇ ಆಗಿ, ಸಮಾನವಾಗಿ, ಎಲ್ಲವನ್ನೂ ಒಳಗೊಂಡಿರುವ ಸರ್ವಸ್ವವನ್ನೂ ಗರ್ಭೀಕರಿಸಿಕೊಂಡ ನಾವು!!
ಆದರೆ, 'ನಾನು' ಎಂಬುದು ದುರಭಿಮಾನವಾಗುತ್ತಾ ಹೋದರೆ ಅದು ಅಸ್ತಿತ್ವದಿಂದ ದೂರ ಸರಿಯಲ್ಪಡುತ್ತಿರುವುದರ ಸೂಚನೆ. ಏಕೆಂದರೆ 'ನಾನು' ಎಂದು ಗರ್ವಪಡುವಾಗ ನಮ್ಮ ದೇಹ - ಮನಸ್ಸು ಒಂದು ಮುಚ್ಚಿದ ವ್ಯವಸ್ಥೆಯಂತಾಗುತ್ತದೆ. ಇದರಿಂದ ಮಿಲಿಯಾಂತರ ಜೀವಕೋಶಗಳು ನಾನು - ನಾನು ಎನ್ನುವಾಗ ದೇಹ ವಿಘಟನೆಯಾದೀತು - ಹೊರಗಿನ ಗಾಳಿ, ನೀರು, ಆಹಾರ ಒಳಗಿನ ದೇಹದ ವ್ಯವಸ್ಥೆಗೆ ವರ್ಜ್ಯವಾದೀತು. 'ನಾವು' ಎಂಬ ಭಾವನೆಯನ್ನು ಎಷ್ಟು ಚೆನ್ನಾಗಿ ಯಾರನ್ನೂ ಬಿಡದೆ ಇಟ್ಟುಕೊಂಡಷ್ಟೂ ನಮ್ಮ ಎಲ್ಲ ಅಂಗೋಪಾಂಗಗಳ ಸಹಯೋಗ ಚೆನ್ನಾಗಿದ್ದು ನಾವು ಆರೋಗ್ಯವಾಗಿ ಇರಬಲ್ಲೆವು. ಇನ್ನು, 'ನಾನು' ಎಂಬುದು ಏನೂ ಅಲ್ಲವೆಂದು ಶೂನ್ಯವಾಗಲೂ ಕೂಡದು. ಆಗಲೂ ಅಸ್ತಿತ್ವವಿರುವುದಿಲ್ಲ.
ಮನಃಶಾಸ್ತ್ರದ ಪ್ರಕಾರ ಮೂರು ವಿಷಯಗಳು ನಮ್ಮ ಅಸ್ತಿತ್ವಕ್ಕೆ ಕಾರಣ. 1. ನಿನ್ನ ಒಳಗೆ ಒಂದು ಶಕ್ತಿ ಇದೆ ಎಂದು ಗುರುತಿಸಿ ನಂಬುವುದು. 2. ನಿನ್ನ ಸುತ್ತಲೂ ಎಲ್ಲ ಕಡೆ ಕಾಣಿಸುವ ಜೀವಿ - ನಿರ್ಜೀವಿಗಳಲ್ಲೂ ಶಕ್ತಿ ಇದೆ ಎಂಬುದನ್ನು ಗುರುತಿಸಿ ನಂಬುವುದು. 3. ನೀನು ಕಾಣದ ಮೇಲಿನ ಅದೃಶ್ಯ ದೈವ ಶಕ್ತಿಯೊಂದಿದೆ ಎಂದೂ ಗುರುತಿಸಿ ನಂಬುವುದು. ಇವು ಮೂರೂ ನಂಬಿಕೆಗಳು ಸಮತೋಲನದಲ್ಲಿರುವ ವಸ್ತು ಮಾತ್ರ ಅಸ್ತಿತ್ವದಲ್ಲಿರಲು ಸಾಧ್ಯವಂತೆ. ಪಂಚಭೂತಗಳಿಂದ ಮಾಡಲ್ಪಟ್ಟ ನಮ್ಮ ದೇಹ ತಿಳಿದೋ ತಿಳಿಯದೆಯೋ ಪಂಚಭೂತಗಳನ್ನೇ ನಂಬಿ ಈ ಮೇಲಿನ ತತ್ತ್ವಾನುಸಾರ ಬದುಕುತ್ತಿದೆ.
ಪರಮಾತ್ಮನನ್ನು ಒಂದು ಅರಿವಾಗಿ ಮಾಡಿಕೊಂಡರೆ ನಾವು ಮೇಲರಿಮೆ ಮತ್ತು ಕೀಳರಿಮೆ ಹೊಂದುವುದಿಲ್ಲ. ವೈಯಕ್ತಿಕ ವಿಭಿನ್ನತೆಯನ್ನು ಅರಿತುಕೊಳ್ಳುತ್ತಲೇ 'ಇನ್ನೊಬ್ಬನೂ ನಾನೇ' ಎಂದು ಭಾವಿಸುವುದೇ ಅನುಭೂತಿ. ನಮ್ಮ ಜ್ಞಾನ ಈ ಅರಿವಿನಲ್ಲಿ ಇರಲೇಬೇಕು. ಅದಕ್ಕೆ ಪರಿಮಿತಿಗಳು ಇರಬಾರದು, ಪರಿಮಿತಿಗಳನ್ನು ಮೀರಬೇಕು.
ಮಾತು, ಕೃತಿ ಮತ್ತು ಕಾನೂನುಗಳನ್ನು ನಾವು ಮಾತ್ರ ಬಳಸುತ್ತೇವೆ ಎಂದು ಭ್ರಮಿಸಿರುತ್ತೇವೋ ಏನೋ. ಆದರೆ, ನಾವು ಯಾರನ್ನು 'ಮೌನಿ' ಎಂದುಕೊಳ್ಳುತ್ತೇವೋ ಅವನು ಅತ್ಯಂತ ಪ್ರಬಲವಾದ ನಮಗಿಂತಲೂ ಹೆಚ್ಚು ಮಿತ್ರರ, ಅಧಿಕಾರಿಗಳ ಸಂಪರ್ಕ ಮತ್ತು ನೆಟ್‌ವರ್ಕ್ ಹೊಂದಿರಬಹುದು. ಯಾರಿಗೆ ಗೊತ್ತು? ಲೋಕ ನಾವಂದುಕೊಂಡಷ್ಟೇ ಎಂದೂ ಆಗಿರುವುದಿಲ್ಲ.
ಒಂದು ಆಲೋಚನೆಯನ್ನೂ ಮಾಡದೇ ನೀಡುವ ತಕ್ಷಣದ ಸಹಾಯ, ಪ್ರೀತಿ - ಅದು ತುಂಬಾ ಮುಖ್ಯವಾದದ್ದು. ನಾವು ನೀಡಿದರೆ ಪುಣ್ಯ ಮತ್ತು ಪಡೆದರೆ ಋಣ. ಹಾಗಾಗಿ ಚರಾಚರಗಳೊಂದಿಗೆ ಕೊಡು - ಕೊಳ್ಳುವಿಕೆಯೊಂದಿಗೆ, ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರಕಾರ ಅಖಂಡವಾಗಿ ನಾವೆಲ್ಲರೂ ಒಂದೇ. ನಮ್ಮ ಅಸ್ತಿತ್ವ ನಮ್ಮ ಒಳಗೂ ಇದೆ, ಹೊರಗೂ ನಾವು ಇದ್ದೇವೆ - ಒಳಹೊರಗು ಇಲ್ಲದಂತೆ!
ಬೃಹದಾರಣ್ಯಕ ಉಪನಿಷತ್ತಿನಲ್ಲಿರುವ ಶಾಂತಿಮಂತ್ರದೊಂದಿಗೆ ಈ ಲೇಖನವನ್ನು ಪೂರ್ಣಗೊಳಿಸುತ್ತಿದ್ದೇನೆ.
ಓಂ ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್-ಭವೇತ್ ||

ಎಲ್ಲರೂ ಸುಖವಾಗಿರಲಿ , ಎಲ್ಲರೂ ಚಿಂತೆಗಳಿಂದ
ವಿಮುಕ್ತರಾಗಿರಲಿ , ಎಲ್ಲರೂ ಒಳ್ಳೆಯ
ವಿಷಯಗಳನ್ನೇ ನೋಡುವಂತಾಗಲಿ , ಯಾರಿಗೂ
ದುಃಖ ಬಾರದಿರಲಿ.

ಓಂ ಶಾಂತಿಃ ಶಾಂತಿಃ ಶಾಂತಿಃ

✍️ ಶಿವಕುಮಾರ್ ಸಾಯ 'ಅಭಿಜಿತ್'
('ಅಭಿಜಿತ್' ನಕ್ಷತ್ರದ ಅಧಿದೇವತೆ ಬ್ರಹ್ಮನನ್ನು ಧ್ಯಾನಿಸಿ ಪ್ರೇರಣೆಯನ್ನು ಪಡೆಯುತ್ತಾ🙏)

Comments

Post a Comment

Popular posts from this blog

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್