ಇಲ್ಲಿಂದ ಬದಲಾಗಲಿದೆ ಭವಿಷ್ಯ?!

ಪ್ರಿಯ ಓದುಗರೇ,
2024ನೇ ಇಸವಿಯ ಮಧ್ಯಭಾಗದಲ್ಲಿ ನಾನು ಅಪಘಾತದಿಂದ ಗಂಭೀರವಾಗಿ ಗಾಯಗೊಂಡದ್ದೂ, ವಿದೇಶಿ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿ ತಿರುಗಿದ್ದು ಮತ್ತು ಮಾರುಕಟ್ಟೆ ಮೌಲ್ಯ ದುಬಾರಿಯಾಗಿದ್ದ ಕಾರಣ ಭಾರತೀಯ ಶೇರುಪೇಟೆ ಕುಸಿಯತೊಡಗಿದ್ದು - ಇವು ಕಾಕತಾಳೀಯವಾಗಿ ಒಂದೇ ಸಮಯದ ಆಸುಪಾಸಿನಲ್ಲಿ ನಡೆದ ಸಂಗತಿಗಳು. ಅಪಘಾತ ನಡೆದದ್ದು ಆಗಸ್ಟ್ 30ರಂದು. ಕೆಪಿ ನ್ಯೂ ಅಯನಾಂಶದಲ್ಲಿ ಅಂದು ನನ್ನ ವಿಂಶೋತ್ತರಿ ದಶಾ ಪ್ರಕಾರ ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶಾದಲ್ಲಿ ಶುಕ್ರ ಪ್ರತ್ಯಂತರ ದೆಸೆಯಲ್ಲಿ ಗುರು ಸೂಕ್ಷ್ಮ ದೆಸೆಯಲ್ಲಿ ಮಂಗಳ ಗ್ರಹದ ಪ್ರಾಣ ದೆಸೆ ಇತ್ತು ಎಂದು ತಿಳಿದುಬರುತ್ತದೆ.
ದುರ್ಘಟನೆ ನಡೆದ ಕಾರಣ ಶೇರುಪೇಟೆಯಲ್ಲಿ ನಾನೊಬ್ಬ ನುರಿತ ಅಭ್ಯಾಸಿಯಾಗಿದ್ದರೂ ಗಾಯಾಳುವಾಗಿದ್ದರಿಂದ ಏನೂ ಮಾಡಲಾಗದೇ ಹೋದ ದುಃಖದಾಯಕ ಸಮಯ ಅದು. ಆ ನಂತರ ಲಾಭವಿರಲಿ, ನಷ್ಟ ಬರಲಿ ನಾನೊಬ್ಬ ಮ್ಯೂಚುವಲ್ ಫಂಡ್‌ಗಳ ನಿವೇಶಕನಾಗಿ ಬದಲಾದೆ. ಆದರೆ ಆ ಪಶ್ಚಾತ್ 2024ರ ಸೆಪ್ಟೆಂಬರ್ ಅಕ್ಟೋಬರ್ ಸಮಯದಿಂದ ಕುಸಿತ ಕಾಣುತ್ತಿರುವ ನಮ್ಮ ಮಾರುಕಟ್ಟೆ ಇದುವರೆಗೂ ಅಂದರೆ ಜುಲೈ 10 2026ರ ತನಕವೂ ತನ್ನ ಮಟ್ಟದಿಂದ ಕೆಳಗೆಯೇ ಇರುವುದು ಕಂಡಿದೆ.
ಹೂಡಿಕೆಗಳು ನಷ್ಟದಲ್ಲೇ ಉಳಿದದ್ಧರಿಂದ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಉದ್ಯೋಗಕ್ಕೆ ರಾಜೀನಾಮೆ ನೀಡುವ ಭಾವನಾತ್ಮಕ ನಿರ್ಧಾರವನ್ನು ನಾನು ಕೈಬಿಡುವಂತಾದದ್ಧು ದೈವಲೀಲೆ. ಆದರೆ ಯಾವ ದಶಾ ಅವಧಿಯೂ ಒಂದೇ ರೀತಿ ಯಾರ ಜೀವನದಲ್ಲೂ ಇರಲಿ ಎಂದು ಇನ್ನಾರೂ ಬಯಸಬಾರದು ಮತ್ತು ನಿರೀಕ್ಷಿಸಲೂ ಬಾರದು. ಏಕೆಂದರೆ ಒಬ್ಬ ಮನುಷ್ಯನಿಗೆ ಸಮಯೋಚಿತವಾಗಿ ಲೌಕಿಕ ಸುಖಗಳೂ, ಅಲೌಕಿಕ ಏಳಿಗೆಯೂ ಸಿಗಬೇಕು.
2025 ಮಾರ್ಚ್ ತಿಂಗಳಿನ ಪ್ರಥಮ ಭಾಷೆ ಪರೀಕ್ಷೆ ಮುಗಿದ ಕೂಡಲೇ 2025ರ ಜುಲೈ ವರೆಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯ ಬದಲಾವಣೆಯ ಬಗ್ಗೆ ಉನ್ನತ ಮಟ್ಟದಲ್ಲಿ ನಾನು ಏನೆಲ್ಲಾ ರೀತಿ ಯಾವೆಲ್ಲಾ ಪ್ರಯತ್ನ ಮಾಡಿರಬಹುದು ಎಂಬುದು ನನಗಷ್ಟೇ ಗೊತ್ತು. ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶಾದಲ್ಲಿ ಈ ಎರಡೂ ಗ್ರಹಗಳು ವಿವಾಹದ ಫಲವನ್ನು ನೀಡಲು ಪ್ರಯತ್ನಿಸಿದ್ದು ಪ್ರಯತ್ನಗಳ ದೃಷ್ಟಿಯಿಂದ ಒಳ್ಳೆಯ ಸಂಗತಿ.
ಬುಧ ಅಂತರ್ದಶಾದ ಮತ್ತೊಂದು ಕೊಡುಗೆ ಎಲ್ಲಾ ಬಗೆಯ ಸಂಘರ್ಷ ಗೊಂದಲಗಳ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತಷ್ಟು ಮುನ್ನಡೆ. ಬುಧ ಅಂತರ್ದಶಾದಲ್ಲಿ ಮುಕ್ತಾಯದ ವೇಳೆಗೆ ಜ್ಯೋತಿಷ್ಯದಲ್ಲಿ ಕೃಷ್ಣಮೂರ್ತಿ ಪದ್ಧತಿಯ ಬಗ್ಗೆಯೂ ಜ್ಞಾನ ಬೆಳೆಸಿಕೊಂಡ ನಂತರ ಪರಾಶರ ಮತ್ತು ಕೆಪಿ ಪದ್ಧತಿ ಬಗ್ಗೆ ಒಂದು ಸಮಗ್ರ ವಿಡಿಯೋ ಮಾಡಿ ಅದನ್ನು ಎಐ ತಂತ್ರಜ್ಞಾನ ಬಳಸಿ ಯೂಟ್ಯೂಟ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದಕ್ಕೆ ಹೆಮ್ಮೆ ಅನುಭವಿಸಿದ್ದೇನೆ. ಬುಧನು ತನ್ನ ಅಂತರ್ದಶಾದಲ್ಲಿ ನನಗೆ ಹಿನ್ನಡೆ ತಂದಿದ್ದಾನೆ ಎಂದು ನಾನು ಅಂದುಕೊಳ್ಳುವುದಿಲ್ಲ. ಏಕೆಂದರೆ, ಅವನು ತಂದೊಡ್ಡಿದ ಸಂಘರ್ಷ ಮತ್ತು ಗೊಂದಲಗಳ ಮೂಲಕ ಸಾಕಷ್ಟು ಬೆಳವಣಿಗೆಯನ್ನೂ ತಂದಿದ್ದಾನೆ.
ಈ ಬ್ಲಾಗ್ ಎಷ್ಟು ಖಾಸಗಿ, ಎಷ್ಟು ಸಾರ್ವಜನಿಕ ಹೇಳಲಾರೆ. ಆದರೆ ಮಾರ್ಚ್ 2026ರಿಂದ ಮಾರ್ಚ್ 2027ರ ವರೆಗೂ ಕೋಟಿ ಪುಣ್ಯ ಗಣೇಶ ಯೋಗದ ಯುತಿಯ ಫಲ ನೀಡಬಲ್ಲ, ಜೊತೆಗೆ ಸಂಭಾವ್ಯ ಲೌಕಿಕ ಫಲದೊಡನೆ ಜೀವನದ ಧ್ಯೇಯವೂ ಗುರು ಮಹಾದೆಸೆಯಲ್ಲಿ ಇರುವ ಈ ಕೇತು ಅಂತರ್ದಶಾ ಅವಧಿಯಲ್ಲಿ ಸಂಭವಿಸುವುದು ಮತ್ತು ಅದು ಏಕಾಏಕಿ ಕೆಲವು ದಿಢೀರ್ ಪರಿವರ್ತನೆ ತಂದರೆ ಆಶ್ಚರ್ಯವೇನಲ್ಲ. ಕೆಪಿ ನಾಲ್ಕು ಹಂತದ ಸಿಗ್ನಿಫಿಕೇಟರ್ಸ್ ಪ್ರಕಾರ ನನ್ನ ಬಯಕೆಗಳಿಗೆ ಇವು ಪೂರಕವಾಗಿವೆ. ಆದರೆ ನನ್ನ ಬಾಹ್ಯ ಕೆಲಸದ ಒತ್ತಡಗಳು ವೈಯಕ್ತಿಕ ಸಂತೋಷಕ್ಕೂ ಸಂಪಾದನೆಯ ಮೂಲವಾಗಿ ಪೂರಕವೇ ಆಗಿದ್ದರೆ ಅದು ಬಾಧೆ ಎನ್ನಬೇಕಿಲ್ಲ. ಆದರೆ ಕೇತು ಇಲ್ಲಿ ಯಾವುದನ್ನು ಕತ್ತರಿಸುತ್ಥಾನೆ ಮತ್ತು ಯಾವುದನ್ನು ಜೋಡಿಸುತ್ತಾನೆ ಎಂಬುದು ನಿಗೂಢ!
ಓದುಗರೇ, ಇವತ್ತು ನಾನು ಕುತೂಹಲಕ್ಕಾಗಿ ಕಳೆದ 7 ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಮಾರುಕಟ್ಟೆಯಲ್ಲಿ ಏನು ಮಾಡಿದ್ದಾರೆ ಪಲಿಶೀಲಿಸಿದ್ದೇನೆ. ಅವರು 4 ದಿನ ನಿವ್ವಳ ಖರೀದಿದಾರರಾಗಿ ಕಾಣಿಸಿಕೊಂಡಿದ್ದಾರೆ. ಟ್ರೆಂಡ್ ಹೇಗೂ ಇರಬಹುದು ಆದರೂ ನನಗೆ ಅನ್ನಿಸುತ್ತದೆ - ಅಮೆರಿಕದ ಡೊನಾಲ್ಡ್ ಟ್ರಂಪ್ ಪರಿಣಾಮಗಳು, ಚೈನಾದ ಪೈಪೋಟಿ ಇವರಡರ ಮಧ್ಯೆ ಮುಂದಿನ ದಿನಗಳಲ್ಲಿ ಭಾರತೀಯ ಶೇರು ಮಾರುಕಟ್ಟೆ ಇಲ್ಲಿಂದ ನಿಧಾನವಾಗಿಯೂ ಇರಬಹುದು ಅಥವಾ ವೇಗವಾಗಿಯಾದರೂ ಇರಬಹುದು - ಬೆಳೆಯುವ ಸಾಧ್ಯತೆ ಜಾಸ್ತಿ ಕಾಣುತ್ತಿದೆ. ಏಕೆಂದರೆ, ಒಂದನೇ ಕಾರಣ ಎರಡು ವರ್ಷಗಳಿಂದ ನಮ್ಮ ಕಂಪೆನಿಗಳಿಗೆ ಬರುತ್ತಲೇ ಇರುವ ಆದಾಯ, ಇದರಿಂದಾಗಿ ಶೇರುಪೇಟೆಯಲ್ಲಿ ತಗ್ಗಿರುವ ಸರಾಸರಿ ಲಾಭ ಮತ್ತು ಆದಾಯದ ನಿಷ್ಪತ್ತಿ ಪ್ರಮಾಣ.
ಏನೇ ಆಗಲಿ, ಹೇಗೆಯೇ ಆಗಲಿ. ಆದರೆ ಬಹುತೇಕ ಖಚಿತವಾಗಿ, ಇಲ್ಲಿಂದ, ಈಗಿನಿಂದಲೇ ಭವಿಷ್ಯ ಬದಲಾಗಬಹುದು!
✍️ ಶಿವಕುಮಾರ್ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ