ಇಲ್ಲಿಂದ ಬದಲಾಗಲಿದೆ ಭವಿಷ್ಯ?!

ಪ್ರಿಯ ಓದುಗರೇ,

2024ನೇ ಇಸವಿಯ ಮಧ್ಯಭಾಗದಲ್ಲಿ ನಾನು ಅಪಘಾತದಿಂದ ಗಂಭೀರವಾಗಿ ಗಾಯಗೊಂಡದ್ದು, ವಿದೇಶಿ ಹೂಡಿಕೆದಾರರು (FII) ನಿವ್ವಳ ಮಾರಾಟಗಾರರಾಗಿ ತಿರುಗಿದ್ದು ಮತ್ತು ಮಾರುಕಟ್ಟೆ ಮೌಲ್ಯ ದುಬಾರಿಯಾಗಿದ್ದ ಕಾರಣ ಭಾರತೀಯ ಶೇರುಪೇಟೆ ಕುಸಿಯತೊಡಗಿದ್ದು — ಇವೆಲ್ಲವೂ ಕಾಕತಾಳೀಯವಾಗಿ ಒಂದೇ ಸಮಯದ ಆಸುಪಾಸಿನಲ್ಲಿ ನಡೆದ ಸಂಗತಿಗಳು.

ಅಪಘಾತ ನಡೆದದ್ದು ಆಗಸ್ಟ್ 30ರಂದು. ಕೆಪಿ (KP) ನ್ಯೂ ಅಯನಾಂಶದ ಪ್ರಕಾರ, ಅಂದು ನನ್ನ ವಿಂಶೋತ್ತರಿ ದಶೆಯಲ್ಲಿ ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶೆ, ಶುಕ್ರ ಪ್ರತ್ಯಂತರ ದೆಸೆ, ಗುರು ಸೂಕ್ಷ್ಮ ದೆಸೆ ಹಾಗೂ ಮಂಗಳ ಗ್ರಹದ ಪ್ರಾಣ ದೆಸೆ ಇತ್ತು ಎಂದು ತಿಳಿದುಬರುತ್ತದೆ.

ದುರ್ಘಟನೆ ನಡೆದ ಕಾರಣ ಶೇರುಪೇಟೆಯಲ್ಲಿ ನಾನೊಬ್ಬ ನುರಿತ ಅಭ್ಯಾಸಿಯಾಗಿದ್ದರೂ, ಗಾಯಾಳುವಾಗಿದ್ದರಿಂದ ಏನೂ ಮಾಡಲಾಗದೇ ಹೋದ ದುಃಖದಾಯಕ ಸಮಯವದು. ಆ ನಂತರ ಲಾಭವಿರಲಿ, ನಷ್ಟ ಬರಲಿ ನಾನೊಬ್ಬ ಮ್ಯೂಚುವಲ್ ಫಂಡ್‌ಗಳ ಹೂಡಿಕೆದಾರನಾಗಿ ಬದಲಾದೆ. ಆದರೆ, 2024ರ ಸೆಪ್ಟೆಂಬರ್ - ಅಕ್ಟೋಬರ್ ಸಮಯದಿಂದ ಕುಸಿತ ಕಾಣುತ್ತಿರುವ ನಮ್ಮ ಮಾರುಕಟ್ಟೆ, ಇದುವರೆಗೂ ಅಂದರೆ ಜುಲೈ 10, 2026ರ ತನಕವೂ ತನ್ನ ಗರಿಷ್ಠ ಮಟ್ಟದಿಂದ ಕೆಳಗೆಯೇ ಇರುವುದು ಕಂಡುಬಂದಿದೆ.

ಹೂಡಿಕೆಗಳು ನಷ್ಟದಲ್ಲೇ ಉಳಿದದ್ದರಿಂದ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಉದ್ಯೋಗಕ್ಕೆ ರಾಜೀನಾಮೆ ನೀಡುವ ಭಾವನಾತ್ಮಕ ನಿರ್ಧಾರವನ್ನು ನಾನು ಕೈಬಿಡುವಂತಾದದ್ದು ದೈವಲೀಲೆಯೇ ಸರಿ. ಆದರೆ, ಯಾವ ದಶಾ ಅವಧಿಯೂ ಎಲ್ಲರ ಜೀವನದಲ್ಲೂ ಒಂದೇ ರೀತಿ ಇರಲಿ ಎಂದು ಯಾರೂ ಬಯಸಬಾರದು ಮತ್ತು ನಿರೀಕ್ಷಿಸಲೂಬಾರದು. ಏಕೆಂದರೆ ಒಬ್ಬ ಮನುಷ್ಯನಿಗೆ ಸಮಯೋಚಿತವಾಗಿ ಲೌಕಿಕ ಸುಖಗಳೂ, ಅಲೌಕಿಕ ಏಳಿಗೆಯೂ ಸಿಗಬೇಕಾಗುತ್ತದೆ.

2025ರ ಮಾರ್ಚ್ ತಿಂಗಳಿನ ಪ್ರಥಮ ಭಾಷೆ ಪರೀಕ್ಷೆ ಮುಗಿದ ಕೂಡಲೇ, ಜುಲೈವರೆಗೂ ಎಸ್ಸೆಸ್ಸೆಲ್ಸಿ (SSLC) ಪರೀಕ್ಷಾ ಪದ್ಧತಿಯ ಬದಲಾವಣೆಯ ಬಗ್ಗೆ ಉನ್ನತ ಮಟ್ಟದಲ್ಲಿ ನಾನು ಏನೆಲ್ಲಾ ರೀತಿಯಲ್ಲಿ, ಯಾವೆಲ್ಲಾ ಪ್ರಯತ್ನಗಳನ್ನು ಮಾಡಿರಬಹುದು ಎಂಬುದು ನನಗಷ್ಟೇ ಗೊತ್ತು. ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶೆ ಇದ್ದಾಗ ಈ ಎರಡೂ ಗ್ರಹಗಳು ವಿವಾಹದ ಫಲವನ್ನು ನೀಡಲು ಪ್ರಯತ್ನಿಸಿದ್ದು, ಪ್ರಯತ್ನಗಳ ದೃಷ್ಟಿಯಿಂದ ಒಳ್ಳೆಯ ಸಂಗತಿಯೇ ಆಗಿದೆ.

ಬುಧ ಅಂತರ್ದಶೆಯ ಮತ್ತೊಂದು ಕೊಡುಗೆಯೆಂದರೆ — ಎಲ್ಲಾ ಬಗೆಯ ಸಂಘರ್ಷ ಮತ್ತು ಗೊಂದಲಗಳ ನಡುವೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನನಗೆ ಮತ್ತಷ್ಟು ಮುನ್ನಡೆ ಸಿಕ್ಕಿತು. ಬುಧ ಅಂತರ್ದಶೆಯ ಮುಕ್ತಾಯದ ವೇಳೆಗೆ ಜ್ಯೋತಿಷ್ಯದಲ್ಲಿ 'ಕೃಷ್ಣಮೂರ್ತಿ ಪದ್ಧತಿ'ಯ (KP System) ಬಗ್ಗೆಯೂ ಜ್ಞಾನ ಬೆಳೆಸಿಕೊಂಡೆ. ಪರಾಶರ ಮತ್ತು ಕೆಪಿ ಪದ್ಧತಿಯ ಬಗ್ಗೆ ಒಂದು ಸಮಗ್ರ ವಿಡಿಯೋ ಮಾಡಿ, ಅದನ್ನು ಎಐ (AI) ತಂತ್ರಜ್ಞಾನ ಬಳಸಿ ಯೂಟ್ಯೂಬ್ (YouTube) ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದಕ್ಕೆ ಹೆಮ್ಮೆಯಿದೆ. ಬುಧನು ತನ್ನ ಅಂತರ್ದಶೆಯಲ್ಲಿ ನನಗೆ ಹಿನ್ನಡೆ ತಂದಿದ್ದಾನೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಅವನು ತಂದೊಡ್ಡಿದ ಸಂಘರ್ಷ ಮತ್ತು ಗೊಂದಲಗಳ ಮೂಲಕವೇ ನನಗೆ ಸಾಕಷ್ಟು ಬೆಳವಣಿಗೆಯನ್ನೂ ನೀಡಿದ್ದಾನೆ.

ಈ ಬ್ಲಾಗ್ ಎಷ್ಟು ಖಾಸಗಿ, ಎಷ್ಟು ಸಾರ್ವಜನಿಕ ಎಂದು ನಾನು ಹೇಳಲಾರೆ. ಆದರೆ ಮಾರ್ಚ್ 2026ರಿಂದ ಮಾರ್ಚ್ 2027ರ ವರೆಗೂ 'ಕೋಟಿ ಪುಣ್ಯ ಗಣೇಶ ಯೋಗ'ದ ಯುತಿಯ ಫಲ ನೀಡಬಲ್ಲ, ಜೊತೆಗೆ ಸಂಭಾವ್ಯ ಲೌಕಿಕ ಫಲದೊಡನೆ ಜೀವನದ ಧ್ಯೇಯವನ್ನೂ ಸಾಕಾರಗೊಳಿಸಬಲ್ಲ ಗುರು ಮಹಾದೆಸೆಯ ಕೇತು ಅಂತರ್ದಶಾ ಅವಧಿ ಇದಾಗಿದೆ. ಈ ಅವಧಿಯಲ್ಲಿ ಜೀವನದಲ್ಲಿ ಏಕಾಏಕಿ ಕೆಲವು ದಿಢೀರ್ ಪರಿವರ್ತನೆಗಳು ಸಂಭವಿಸಿದರೆ ಆಶ್ಚರ್ಯವೇನಿಲ್ಲ. ಕೆಪಿ ನಾಲ್ಕು ಹಂತದ ಸಿಗ್ನಿಫಿಕೇಟರ್ಸ್ (4-Step Significators) ಪ್ರಕಾರ ಇವು ನನ್ನ ಬಯಕೆಗಳಿಗೆ ಪೂರಕವಾಗಿವೆ. ನನ್ನ ಬಾಹ್ಯ ಕೆಲಸದ ಒತ್ತಡಗಳು ವೈಯಕ್ತಿಕ ಸಂತೋಷ ಹಾಗೂ ಸಂಪಾದನೆಯ ಮೂಲಕ್ಕೆ ಪೂರಕವಾಗಿದ್ದರೆ, ಅದನ್ನು ಬಾಧೆ ಎನ್ನಲಾಗದು. ಆದರೆ, ಕೇತು ಇಲ್ಲಿ ಯಾವುದನ್ನು ಕತ್ತರಿಸುತ್ತಾನೆ ಮತ್ತು ಯಾವುದನ್ನು ಜೋಡಿಸುತ್ತಾನೆ? ಹಾಗೆಯೇ ಗುರು ಯಾವ ಜ್ಞಾನ ನೀಡುತ್ತಾನೆ ಎಂಬುದು ಮಾತ್ರ ಸದ್ಯಕ್ಕೆ ನಿಗೂಢ!

ಓದುಗರೇ, ಇವತ್ತು ನಾನು ಕುತೂಹಲಕ್ಕಾಗಿ ಕಳೆದ 7 ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತದ ಮಾರುಕಟ್ಟೆಯಲ್ಲಿ ಏನು ಮಾಡಿದ್ದಾರೆಂದು ಪರಿಶೀಲಿಸಿದೆ. ಅವರು 4 ದಿನ ನಿವ್ವಳ ಖರೀದಿದಾರರಾಗಿ ಕಾಣಿಸಿಕೊಂಡಿದ್ದಾರೆ. ಮಾರುಕಟ್ಟೆಯ ಟ್ರೆಂಡ್ ಹೇಗೇ ಇರಲಿ, ಅಮೆರಿಕದ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳ ಪರಿಣಾಮಗಳು ಮತ್ತು ಚೀನಾದ ಪೈಪೋಟಿ — ಇವೆರಡರ ಮಧ್ಯೆಯೂ ಮುಂದಿನ ದಿನಗಳಲ್ಲಿ ಭಾರತೀಯ ಶೇರು ಮಾರುಕಟ್ಟೆ ಇಲ್ಲಿಂದ ನಿಧಾನವಾಗಿಯಾದರೂ ಅಥವಾ ವೇಗವಾಗಿಯಾದರೂ ಬೆಳೆಯುವ ಸಾಧ್ಯತೆಯೇ ಜಾಸ್ತಿ ಕಾಣಿಸುತ್ತಿದೆ.

ಇದಕ್ಕೆ ಮುಖ್ಯ ಕಾರಣ: ಕಳೆದ ಎರಡು ವರ್ಷಗಳಿಂದ ನಮ್ಮ ದೇಶೀಯ ಕಂಪೆನಿಗಳಿಗೆ ಬರುತ್ತಲೇ ಇರುವ ಉತ್ತಮ ಆದಾಯ. ಇದರಿಂದಾಗಿ ಶೇರುಪೇಟೆಯಲ್ಲಿ 'ಸರಾಸರಿ ಲಾಭ ಮತ್ತು ಆದಾಯದ ನಿಷ್ಪತ್ತಿ ಪ್ರಮಾಣ' (P/E Ratio) ತಗ್ಗಿದೆ.

ಏನೇ ಆಗಲಿ, ಹೇಗೆಯೇ ಆಗಲಿ... ಬಹುತೇಕ ಖಚಿತವಾಗಿ, ಇಲ್ಲಿಂದ, ಈಗಿನಿಂದಲೇ ಭವಿಷ್ಯ ಬದಲಾಗಬಹುದು!

✍️ ಶಿವಕುಮಾರ್ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ