ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವುದು
'ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು' ಎಂಬಂತೆ ಮೊದಲು ಸಂಸ್ಕಾರ ನೀಡುವವಳು ತಾಯಿ. 'ವಿದ್ಯೆಯಲಿ ತನುಮನವ ತಿದ್ದಿಕೊಳ್ಳಲು ಬೇಕು' ಎಂದು ಕವಿ ಸರ್ವಜ್ಞ ಹೇಳಿದ್ದಾನೆ.
ಹಿಂದೆ ಮನೆಗಳಲ್ಲಿ ಕೂಡುಕುಟುಂಬಗಳಿದ್ದವು. ಸಹಬಾಳ್ವೆಯ ಪಾಠ ಸಿಗುತ್ತಿತ್ತು. ಈಗ ಮಕ್ಕಳಿಗೆ ಅಪ್ಪ ಅಮ್ಮನ ಪ್ರೀತಿ ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಸಮಾಜ ಹಿಂದುಳಿದಿದೆ.
ಪಶುತ್ವದಿಂದ ಮನುಷ್ಯತ್ವಕ್ಕೆ, ಮನುಷ್ಯತ್ವದಿಂದ ಮಾನವತ್ವಕ್ಕೆ, ಮಾನವತ್ವದಿಂದ ದೈವತ್ವಕ್ಕೇರಬೇಕು ಎಂದು ಹಿರಿಯರು ಹಂಬಲಿಸುತ್ತಿದ್ದರು. “The thought manifests as the word. The word manifests as the deed. The deed develops into habit. And the habit hardens into character” ಎಂದು ಗೌತಮ ಬುದ್ಧ ಹೇಳಿದ್ದಾನೆ. ಆದುದರಿಂದ ಉತ್ತಮ ಪ್ರವೃತ್ತಿಗಳನ್ನು ಬಾಲ್ಯದಲ್ಲಿ ರೂಢಿಸಿಕೊಂಡರೆ ಇಡೀ ಬದುಕನ್ನೇ ಉತ್ತಮವಾಗಿ ರೂಪಿಸಬಹುದು.
ನಮ್ಮ ದಿನಚರಿಯನ್ನು ಅತ್ಯುತ್ತಮವಾಗಿ ಯೋಜಿಸಬೇಕು. ಬೆಳಗ್ಗೆ ಪ್ರಾರ್ಥನೆ, ಯೋಗ, ಧ್ಯಾನವನ್ನು ಕೈಗೊಳ್ಳುವುದರೊಂದಗೆ ಒಳ್ಳೆಯ ಸಂಕಲ್ಪ ಗುರಿಗಳನ್ನು ಹಾಕಿಕೊಳ್ಳಬೇಕು. ಆ ಪ್ರಕಾರ ಪ್ರತಿ ದಿನವನ್ನು ಯೋಜಿಸಿ ಒಳ್ಳೆಯ ವಿಚಾರಗಳಿಗೆ ಕೇಂದ್ರೀಕರಿಸಿ ಕಳೆಯಬೇಕು.
ಗುರುಹಿರಿಯರನ್ನು ಗೌರವಿಸುವ ಅಭ್ಯಾಸವು ಮನೆಯಿಂದ ಆರಂಭವಾಗಬೇಕು. ಶಾಲೆಯಲ್ಲೂ ಶಿಸ್ತಿನ ನಡೆ ಮತ್ತು ನುಡಿ ಇರಬೇಕು. ಭಾಷೆ ಮತ್ತು ಬುದ್ಧಿ ಸಮಾನಾಂತರವಾಗಿ ಬೆಳೆಯುವವು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದುದರಿಂದ ಉತ್ತಮ ಭಾಷೆಯನ್ನು ಆಡುವುದು ಕೂಡ ಮುಖ್ಯ.
ನಿತ್ಯದ ವ್ಯವಹಾರದಲ್ಲಿ ನಮಗೆ ಸಮಾಜದೊಂದಿಗೆ ಸಂಪರ್ಕ ಅವಶ್ಯಕ. ನಮ್ಮ ವ್ಯಾಪಾರ, ಕೆಲಸಗಳ ಯಶಸ್ಸು, ಅಭಿವೃದ್ಧಿ, ಸಂಪಾದನೆ ಇವೆಲ್ಲಾ ಇತರರೊಂದಿಗೆ ನಮಗಿರುವ ಸಂಬಂಧ, ಗೆಳೆತನ, ಜನ ಸಂಪರ್ಕ, ವಿಶ್ವಾಸಗಳನ್ನು ಅವಲಂಬಿಸುತ್ತದೆ. ಧ್ಯಾನದಲ್ಲಿ ಮುನ್ನಡೆದಂತೆ ಜನರನ್ನು ಆಕರ್ಷಿಸುವ ಒಂದು ಶಕ್ತಿಯನ್ನು ನಾವು ಪಡೆಯುತ್ತೇವೆ. ಆತ್ಮ ವಿಶ್ವಾಸ ಮೇಲೇರುತ್ತಾ ಸಾಗುತ್ತದೆ. ಇದ್ದಕ್ಕಿದ್ದಂತೆ ನಮ್ಮ ಸುತ್ತಲಿನ ಜನ ಸ್ನೇಹದಿಂದ, ಆತ್ಮೀಯತೆಯಿಂದ ನಮ್ಮೊಂದಿಗೆ ವರ್ತಿಸುವುದನ್ನು ನಾವೇ ಅಚ್ಚರಿಯಿಂದ ನೋಡುವಂತಾಗುತ್ತದೆ. ಹೀಗೆ ನಾವು ಧ್ಯಾನದಲ್ಲಿ ಮುನ್ನಡೆದಾಗ ದೈವಿಕ ಶಕ್ತಿ ನಮ್ಮಲ್ಲಿ ಜಾಗೃತವಾಗಿ, ನಮ್ಮಿಂದ ಹೊರಹೊಮ್ಮುವ ಸ್ಪಂದನಗಳು ಹೆಚ್ಚು ಸ್ನೇಹಮಯವಾಗಿ, ನಮ್ಮ ಇಡೀ ಜೀವನವೇ ಆನಂದಮಯವಾಗುತ್ತದೆ.
ಗುರುವನ್ನು ನಾವು ಗೌರವಿಸಲೇ ಬೇಕು. ಏಕೆಂದರೆ ಅದು ಕಲಿತ ವಿದ್ಯೆಯ ಸಫಲತೆಗಾಗಿ. ಗುರುವಿನ ಉಪದೇಶವನ್ನು ಹೇಗೆ ಗೌರವಪೂರ್ವಕ ಸ್ವೀಕರಿಸಬೇಕು ಎಂಬ ಬಗ್ಗೆ ವ್ಯಾಸ ಮಹರ್ಷಿಗಳು "ತತ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವ್ಯಯಾ" ಎಂದು ಈ ಬಗ್ಗೆ ಭಗವದ್ಗೀತೆಯಲ್ಲಿ ತಿಳಿಸಿದ್ದಾರೆ.
ತಂದೆತಾಯಿ-ಗುರುಗಳಿಗೋಸ್ಕರ ನಾವು ಅಭ್ಯಾಸ ಮಾಡಬೇಕಾದ್ದಲ್ಲ. ಅದು ನಮಗೋಸ್ಕರ ಆದುದರಿಂದ ಸ್ವಯಂ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.
ಇತ್ತೀಚೆಗೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಇದನ್ನು ತಪ್ಪಿಸಲು ನಾವು "ಓದದಿದ್ದರೂ ಪರವಾಗಿಲ್ಲ ಮನೆಯಲ್ಲಿ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿರುವ ಒಂದು ಸಂಕಲ್ಪ ಮಾಡಬೇಕು" ಎಂದು ಮಕ್ಕಳಲ್ಲಿ ನುಡಿಯಬೇಕು. ಇದರಿಂದ ಖಂಡಿತ ಒಂದು ಬದಲಾವಣೆ ಸಾಧ್ಯ.
ಯೋಗಕ್ಕೆ ಮಹತ್ವ ನೀಡಿದಂತೆ ಹಿತವಾದ ಆಹಾರಕ್ಕೂ ಮಹತ್ವ ನೀಡಬೇಕು. "ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ; ಹಿತವಿರಲಿ ವದನದಲಿ ಋತವ ಬಿಡದಿರಲಿ; ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ; ಅತಿಬೇಡವೆಲ್ಲಿಯುಂ ಮಂಕುತಿಮ್ಮ" ಎಂದು ಕವಿ ಡಿವಿಜಿಯವರು ಕಗ್ಗದಲ್ಲಿ ನುಡಿದಿದ್ದಾರೆ.
ಪ್ರೀತಿ, ಶಕ್ತಿ, ಧೈರ್ಯ, ಶಾಂತಿ, ಸತ್ಯ, ಸಹನೆ, ಕ್ಷಮೆ, ಕರುಣೆ ಇವು ಆತ್ಮದ ಗುಣಗಳೆಂದು ಪರಿಗಣಿಸಿದೆ. ಈ ಗುಣಗಳನ್ನು ಹೆಚ್ಚು ಹೊಂದಬೇಕು. ಅದಕ್ಕೆ ಅನುವಾಗುವಂತೆ ಅಭ್ಯಾಸದಿಂದ ಸಂಸ್ಕಾರ ಬೆಳೆಸಿಕೊಳ್ಳಬೇಕು.
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಏಕಲವ್ಯನ ಸಾಧನೆ, ಶ್ರವಣನ ಮಾತಾ - ಪಿತೃಭಕ್ತಿ, ಅಭಿಮನ್ಯುವಿನ ತೇಜಸ್ಸು ಮಕ್ಕಳಲ್ಲಿ ಸೃಜಿಸಬೇಕು.
ಇತ್ತೀಚೆಗೆ ಮಕ್ಕಳಲ್ಲಿ ಸ್ವಂತಿಕೆ ಮತ್ತು ಅಭಿಮಾನ ಕಡಿಮೆಯಾಗಿದೆ. ಕನ್ನಡದ ನೆಲ, ಜಲ, ಸಂಸ್ಕೃತಿ ಭಾಷೆ, ಸಂಪ್ರದಾಯಗಳ ಬಗ್ಗೆ ಕಳಕಳಿ ಮೂಡಿಸಬೇಕು. ಕನ್ನಡ ಭಾಷೆಯ ಪ್ರಶ್ನೆ ಬಂದಾಗ ನಾವು ಮುಂದಿರಬೇಕು.
ಮನೆಯಲ್ಲಿ ನಮ್ಮ ದೈನಂದಿನ ದಿನಚರಿಯಲ್ಲಿ ಕ್ರಮಬದ್ಧತೆ ಇರಲಿ. ಆಹಾರ ವಿಹಾರ, ಆಚಾರ ವಿಚಾರ, ಸಂಪ್ರದಾಯದ ಬಗ್ಗೆ ಒಲವು, ಪರಂಪರೆಯ ಪ್ರಜ್ಞೆ ಇರಬೇಕು. ಅದಕ್ಕಾಗಿ ಪುರಾಣದ ಮತ್ತು ಸಂಸ್ಕೃತಿಯ ಹೆಗ್ಗುರುತಿನಂತಿರುವ ಮಹಾಕಾವ್ಯಗಳ ಕತೆಗಳನ್ನು ಓದಬೇಕು. ಇದರಿಂದ ಆನುಷಂಗಿಕವಾಗಿ ಕೆಲವು ಮೌಲ್ಯಗಳು ಬೆಳೆಯುತ್ತವೆ.
✍️ಶಿವಕುಮಾರ ಸಾಯ 'ಅಭಿಜಿತ್'
Iddaddannu heliddiri...odalu samayavellide...olle baraha.
ReplyDeleteRajani bhat
ಧನ್ಯವಾದಗಳು
Delete