ಡಿಜಿಟಲ್ ಮಾಧ್ಯಮಗಳ ಅತಿರೇಕ ಮತ್ತು ನೈತಿಕ ಸ್ಥಿತ್ಯಂತರ: ಇಂದಿನ ಯುವ ಪೀಳಿಗೆಯ ಅಸ್ಮಿತೆಯ ಬಿಕ್ಕಟ್ಟು
ಇಪ್ಪತ್ತೊಂದನೇ ಶತಮಾನದ ತಾಂತ್ರಿಕ ಕ್ರಾಂತಿಯು ಮಾನವನ ನಾಗರಿಕತೆಯನ್ನು ಅಭೂತಪೂರ್ವ ವೇಗದಲ್ಲಿ ಮುನ್ನಡೆಸಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ (Social Media) ಆಗಮನವು ಜಗತ್ತನ್ನು ಒಂದು ಪುಟ್ಟ ಜಾಗತಿಕ ಹಳ್ಳಿಯನ್ನಾಗಿ ಪರಿವರ್ತಿಸಿರುವುದು ಸುಳ್ಳಲ್ಲ. ಜ್ಞಾನಾರ್ಜನೆ, ಉದ್ಯೋಗ ಸೃಷ್ಟಿ ಹಾಗೂ ಸಕಾರಾತ್ಮಕ ಅಭಿವ್ಯಕ್ತಿಗೆ ವೇದಿಕೆಯಾಗಿರಬೇಕಿದ್ದ ಡಿಜಿಟಲ್ ಮಾಧ್ಯಮಗಳು, ಕಲೆ, ಸಾಹಿತ್ಯ ಮತ್ತು ತಂತ್ರಜ್ಞಾನದ ಧನಾತ್ಮಕ ಬಳಕೆಗೆ ಅಪಾರ ಅವಕಾಶಗಳನ್ನೂ ಕಲ್ಪಿಸಿವೆ. ಆದರೆ, ಇದೇ ತಂತ್ರಜ್ಞಾನದ ಅತಿರೇಕವು ಇಂದು ಸಮಾಜದಲ್ಲಿ ಹೊಸದೊಂದು ಸಾಂಸ್ಕೃತಿಕ ಮತ್ತು ನೈತಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿರುವುದು ತೀವ್ರ ಆತಂಕದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇವು ಕೇವಲ ತತ್ಕಾಲದ ಪ್ರಸಿದ್ಧಿ ಹಾಗೂ ಆರ್ಥಿಕ ಲಾಭದ ಶಾರ್ಟ್‌ಕಟ್‌ಗಳಾಗಿ ಮಾರ್ಪಡುತ್ತಿವೆ.
ಕ್ಷಣಿಕ ಆಕರ್ಷಣೆ ಮತ್ತು ಮೌಲ್ಯಚ್ಯುತಿ
ಇಂದಿನ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನಂತಹ ಅಲ್ಗೋರಿದಮ್‌ಗಳು ಜ್ಞಾನಾಧಾರಿತ ವಿಷಯಗಳಿಗಿಂತ ಹೆಚ್ಚಾಗಿ ಗ್ಲಾಮರ್ ಮತ್ತು ಅತಿರೇಕದ ಪ್ರದರ್ಶನ ಆಧಾರಿತ ಕಂಟೆಂಟ್‌ಗಳನ್ನು ಅತಿ ವೇಗವಾಗಿ ವೈರಲ್ ಮಾಡುತ್ತವೆ. ನೈತಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳನ್ನು ಬದಿಗೊತ್ತಿ, ಕೇವಲ ಬಾಹ್ಯ ಪ್ರದರ್ಶನ ಅಥವಾ ವಿವೇಚನೆಯಿಲ್ಲದ ಚಟುವಟಿಕೆಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ರಾತ್ರೋರಾತ್ರಿ ಲಕ್ಷಾಂತರ ಫಾಲೋವರ್ಸ್ ಹಾಗೂ ಅಪಾರ ಹಣ ಗಳಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೆಚ್ಚಾಗುತ್ತಿದೆ. ಸಮಾಜವು ಯಾವುದನ್ನು ವಿವೇಚನಾರಹಿತ ಲೈಕ್ ಮತ್ತು ಕಮೆಂಟ್‌ಗಳ ಮೂಲಕ ಪ್ರೋತ್ಸಾಹಿಸುತ್ತದೆಯೋ, ಅದನ್ನೇ ಯಶಸ್ಸಿನ ಅಳತೆಗೋಲು ಎಂದು ಭ್ರಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಷ್ಟಪಟ್ಟು ಶ್ರಮಿಸದೆ, ಸುಲಭವಾಗಿ ಹಣ ಮಾಡುವ ಈ ಆಕರ್ಷಣೆಯು ಇಂದಿನ ಯುವ ಪೀಳಿಗೆಯನ್ನು ತಪ್ಪು ದಾರಿಗೆಳೆಯುತ್ತಿದೆ.
ಶಿಕ್ಷಣದ ಅವಗಣನೆ ಮತ್ತು ನಿರುದ್ಯೋಗದ ಕಹಿಸತ್ಯ
ಪ್ರಸಕ್ತ ಸ್ಥಿತ್ಯಂತರದ ಸನ್ನಿವೇಶದ ಇನ್ನೊಂದು ಕರಾಳ ಮುಖವೆಂದರೆ ಶೈಕ್ಷಣಿಕ ವಲಯದಲ್ಲಿ ಎದುರಾಗುತ್ತಿರುವ ಬೌದ್ಧಿಕ ದಿವಾಳಿತನ. ಪತ್ರಿಕೋದ್ಯಮ (Journalism), ಕಲೆ (Arts), ಸಾಹಿತ್ಯ(Literature), ತತ್ತ್ವಶಾಸ್ತ್ರ(Philosophy) ಹಾಗೂ ಇತರೆ ಉನ್ನತ ಪದವಿಗಳನ್ನು ಪಡೆದ ಅದೆಷ್ಟೋ ಬುದ್ಧಿವಂತ ಮತ್ತು ಸೃಜನಶೀಲ ಯುವಕ-ಯುವತಿಯರು ಇಂದು ಮಾರುಕಟ್ಟೆಯಲ್ಲಿ ಸೂಕ್ತ ಉದ್ಯೋಗಾವಕಾಶಗಳಿಲ್ಲದೆ ನರಳುತ್ತಿದ್ದಾರೆ. ಸಾಂಪ್ರದಾಯಿಕ ಮಾಧ್ಯಮ ರಂಗಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಕಾರಣ, ಅರ್ಹತೆ ಇದ್ದರೂ ಸೂಕ್ತ ಸಂಬಳ ಮತ್ತು ಗೌರವ ಸಿಗುತ್ತಿಲ್ಲ.
ಇಲ್ಲಿ ಎದುರಾಗುವ ಅತ್ಯಂತ ಕಹಿಯಾದ ವ್ಯತಿರಿಕ್ತತೆಯೆಂದರೆ—ಒಬ್ಬ ಪದವೀಧರರು ಅಥವಾ ಪದವೀಧರೆಯರು ಇಡೀ ದಿನ ಶ್ರಮಪಟ್ಟು ಸಮಾಜಮುಖಿಯಾದ ಲೇಖನ ಬರೆದಾಗ ಅಥವಾ ಸಂಶೋಧನೆ ನಡೆಸಿದಾಗ ಸಿಗುವ ಮನ್ನಣೆ ಮತ್ತು ಸಂಭಾವನೆಗಿಂತ, ಸೋಷಿಯಲ್ ಮೀಡಿಯಾದಲ್ಲಿ ಕೇವಲ ಕ್ಷಣಿಕ ಮನರಂಜನೆ ಅಥವಾ ಅತಿರೇಕದ ಪ್ರದರ್ಶನ ನೀಡುವವರಿಗೆ ಸಿಗುವ ಆರ್ಥಿಕ ಲಾಭ ಹಾಗೂ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಾಗಿರುತ್ತದೆ. ಈ ಆರ್ಥಿಕ ಅಸಮಾನತೆ ಮತ್ತು ಬೌದ್ಧಿಕ ಶ್ರಮಕ್ಕೆ ಸಿಗದ ಗೌರವವು, ಓದಿಕೊಂಡ ಯುವ ಜನತೆಯನ್ನೂ ಸಹ ಭ್ರಮನಿರಸನಕ್ಕೆ ತಳ್ಳಿ, ಹಣದ ಅನಿವಾರ್ಯತೆಗಾಗಿ ತಮ್ಮ ಆದರ್ಶಗಳನ್ನು ಬಿಟ್ಟು ಶಾರ್ಟ್‌ಕಟ್ ದಾರಿಗೆ ಶರಣಾಗುವಂತೆ ಮಾಡುತ್ತಿದೆ.
ಸಾಮಾಜಿಕ ನೈತಿಕತೆಯ ಮೇಲಾಗುತ್ತಿರುವ ಪ್ರಭಾವ
ಬರಬರುತ್ತಾ ಅತಿರೇಕಗಳು ಹೆಚ್ಚಾಗಿ, ಅವು ಕೇವಲ ವೈಯಕ್ತಿಕ ಆಯ್ಕೆಯ ಪ್ರಶ್ನೆಯಾಗಿ ಉಳಿದಿಲ್ಲ; ಬದಲಿಗೆ ಇಡೀ ಸಮಾಜದ ಸಾಂಸ್ಕೃತಿಕ ಪತನದ ಮುನ್ನುಡಿಯಾಗಿದೆ. ಸಮಾಜವು ಜ್ಞಾನ, ಕೌಶಲ ಮತ್ತು ನೈತಿಕತೆಯನ್ನು ಗೌರವಿಸುವುದನ್ನು ನಿಲ್ಲಿಸಿ, ಕೇವಲ ಕ್ಷಣಿಕ ಆಕರ್ಷಣೆಗೆ ಮತ್ತು ಹಣಕ್ಕೆ ಮಣೆ ಹಾಕಿದಾಗ ಮುಂದಿನ ಪೀಳಿಗೆಯ ಆದ್ಯತೆಗಳು ಸಂಪೂರ್ಣವಾಗಿ ಬದಲಾಗುತ್ತವೆ. ಯುವಜನತೆಯಲ್ಲಿ ಓದುವ, ಚಿಂತಿಸುವ ಮತ್ತು ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡುವ ಪ್ರವೃತ್ತಿ ಕಡಿಮೆಯಾಗಿ, ಕೇವಲ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗುವ ಹಪಹಪಿ ಹೆಚ್ಚಾಗುತ್ತದೆ. ಇದು ಸಮಾಜದ ನೈತಿಕ ದಿಕ್ಸೂಚಿಯನ್ನು ತಪ್ಪಿಸುತ್ತದೆ.
ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ನಿಷೇಧಿಸಲು ಸಾಧ್ಯವಿಲ್ಲ, ಆದರೆ ಅದರ ಬಳಕೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಬೌದ್ಧಿಕ ಶ್ರಮ, ಕೌಶಲ್ಯ ಹಾಗೂ ನೈತಿಕ ಮೌಲ್ಯಗಳಿಗೆ ಸಮಾಜದಲ್ಲಿ ಮತ್ತೆ ಸೂಕ್ತ ಸ್ಥಾನಮಾನ ಸಿಗಬೇಕಿದೆ. ಯುವ ಪೀಳಿಗೆಯು ಕ್ಷಣಿಕ ಪ್ರಸಿದ್ಧಿಯ ಭ್ರಮೆಯಿಂದ ಹೊರಬಂದು, ದೀರ್ಘಾವಧಿಯ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು. ಸಮಾಜವೂ ಸಹ ಕೇವಲ ಕಣ್ಣಿಗೆ ತಂಪನ್ನಿಡುವ ಕಂಟೆಂಟ್‌ಗಳನ್ನು ಮಾತ್ರ ಆರಾಧಿಸುವುದನ್ನು ಬಿಟ್ಟು, ಬುದ್ಧಿಗೆ ಶಕ್ತಿ ನೀಡುವ ಜ್ಞಾನವನ್ನು ಪ್ರೋತ್ಸಾಹಿಸಿದಾಗ ಮಾತ್ರ ಈ ಸಾಂಸ್ಕೃತಿಕ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ.
✍️ಶಿವಕುಮಾರ್ ಸಾಯ 'ಅಭಿಜಿತ್'
Comments
Post a Comment